Home ಸ್ಥಳೀಯ ಸಮಾಚಾರ ಬೆಳ್ತಂಗಡಿ ನೂತನ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ; ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವ ಬಸ್ ನಿಲ್ದಾಣ

ಬೆಳ್ತಂಗಡಿ ನೂತನ ಬಸ್ ನಿಲ್ದಾಣ ಕಾಮಗಾರಿ ನನೆಗುದಿಗೆ; ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವ ಬಸ್ ನಿಲ್ದಾಣ

0

ಬೆಳ್ತಂಗಡಿ;  ತಾಲೂಕು ಕೇಂದ್ರವಾದ ಬೆಳ್ತಂಗಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಸ್ ನಿಲ್ದಾಣ ಕಾಮಗಾರಿ ಕಳೆದ ಹಲವು ತಿಂಗಳಿನಿಂದ ನೆನೆಗುದಿಗೆ ಬಿದ್ದಿದ್ದು ಇದೀಗ ಇಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ.
2023ರಲ್ಲಿ ಆರಂಭವಾದ  12 ಕೋಟಿ ರೂ. ಅನುದಾನದ ಪ್ರಥಮ ಹಂತದ ಕಾಮಗಾರಿಯಲ್ಲಿ ನೆಲಮಟ್ಟದ ಕೆಲಸಗಳು  ನಡೆಯುತ್ತಿದ್ದು ಇದೂ ಅಪೂರ್ಣ ವಾಗಿದೆ.  ಇಲ್ಲಿ ಕಾಮಗಾರಿ ನಿಂತು ತಿಂಗಳುಗಳೇ ಕಳೆದಿದ್ದು ಕಾಮಗಾರಿಗಾಗಿ ಮಾಡಿರುವ ಹೊಂಡಗಳಲ್ಲಿ ಕೊಳಚೆ ನೀರು ನಿಂತು ಸಾಂಕ್ರಮಿಕ ರೋಗಗಳಿಗೆ ಕಾರಣವಾಗುತ್ತಿದೆ.  ಮಳೆಗಾಲದ ಭಾರಿ ಮಳೆ ಕಾಮಗಾರಿಗೆ ಅಡ್ಡಿ ನೀಡಿದೆ ಎಂದು ಹೇಳಲಾಗುತ್ತಿದ್ದು ಜೂನ್ ತಿಂಗಳಲ್ಲಿ ನಿಲ್ಲಿಸಿದ ಕಾಮಗಾರಿ ಇನ್ನೂ ಆರಂಭವಾಗಿಲ್ಲ ಕಾಮಗಾರಿಗೆ ತಂದಿರುವ ಕಬ್ಬಿಣ ತುಕ್ಕು ಹಿಡಿಯುತ್ತಿದೆ. ಒಂದಿಷ್ಟು ಕಬ್ಬಿಣವನ್ನು ಪಿಲ್ಲರ್ ಗೆಂದು ಕಟ್ಟಿ ನಿಲ್ಲಿಸಲಾಗಿದ್ದು ಎಲ್ಲವೂ ತುಕ್ಕು ಹಿಡಿದು ಹೋಗಿದೆ. ಇದೀ ಕಬ್ಬಣ ಉಪಯೋಗಿಸಿ ಕಾಮಗಾರಿ ನಡೆಸುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಮುಂದಿಡುತ್ತಿದ್ದಾರೆ.
ಬಸ್ ನಿಲ್ದಾಣ ನಿರ್ಮಾಣ ಪ್ರದೇಶ ಸಂಪೂರ್ಣ ಗದ್ದೆಯಂತಿದ್ದು ಒಳಗಡೆ ಹೋದರೆ ಹೂತು ಹೋಗುವಂತಿದೆ. ಆರಂಭ ಹಂತದ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ನಡೆಸಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಮಳೆಗಾಲದಲ್ಲಿ ಇಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಮಣ್ಣು ಕುಸಿದು ಸಾಕಷ್ಟು ಅವಾಂತರ ಉಂಟಾಗಿದೆ. ಬಸ್ ನಿಲ್ದಾಣ ನಿರ್ಮಾಣವಾಗುತ್ತಿರುವ ಪೊಲೀಸ್ ಠಾಣೆಯ ಭಾಗದಲ್ಲೂ ಮಣ್ಣು ಕುಸಿದು ಠಾಣೆಯ ಆವರಣ ಗೋಡೆ ಕುಸಿಯುವ ಭೀತಿ ಎದುರಾಗಿತ್ತು.
ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಹೆಚ್ಚಿನ ಗಲೀಜು ಇದ್ದು ಇಲ್ಲಿ ಅಲ್ಲಲ್ಲಿ ನೀರು ಸಂಗ್ರಹಗೊಂಡು ಸೊಳ್ಳೆ ಉತ್ಪತ್ತಿ ತಾಣವಾಗಿ ಪರಿಣಮಿಸಿದೆ.ಇದರ ಪಕ್ಕದಲ್ಲಿ ಹಳೆ ಬಸ್ ನಿಲ್ದಾಣ,ಅರಣ್ಯ ಇಲಾಖೆ, ಪೊಲೀಸ್ ಠಾಣೆ,ತಾಲೂಕು ಕಚೇರಿ,
ಮಳಿಗೆಗಳು ಇತ್ಯಾದಿ ಇದ್ದು ಈ ಪರಿಸರದ ಮೂಲಕ ಸಾವಿರಾರು ಜನ ಓಡಾಟ ನಡೆಸುತ್ತಾರೆ.ಇವರೆಲ್ಲರೂ ಸಾಂಕ್ರಾಮಿಕ ರೋಗಗಳ ಭೀತಿಯಿಂದಲೇ ಓಡಾಟ ನಡೆಸುವ ಅನಿವಾರ್ಯತೆ ಇದೆ.
ಬಸ್ ನಿಲ್ದಾಣ ಕಾಮಗಾರಿಗಾಗಿ ವರ್ಷದ ಮೊದಲೇ ಹಳೆ ಬಸ್ ನಿಲ್ದಾಣದಲ್ಲಿದ್ದ ಹಲವು ಅಂಗಡಿಗಳನ್ನು ತೆರವುಗೊಳಿಸಲಾಗಿದ್ದರು ಆ ಭಾಗದ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ. ಕಳೆದ ಎರಡು ವರ್ಷಗಳಿಂದ ಇಲ್ಲಿ ಅಗೆದು ಹಾಕಿರುವುದೇ ದೊಡ್ಡ ಸಾಧನೆಯಾಗಿದೆ. ಅನುದಾನ ಮಂಜೂರಾಗಿದ್ದರೂ ಎರಡು ವರ್ಷದಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು ಯಾಕೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ. ಈಗಿನ ವೇಗದಲ್ಲಿ ನಡೆದರೆ ಇನ್ನೂ ಎರಡು ವರ್ಷ ಕಳೆದರೂ ಬೆಳ್ತಂಗಡಿ ಯ ಕನಸಿನ ಬಸ್ ನಿಲ್ದಾಣ ಪೂರ್ಣಗೊಳ್ಳಲಾರದು ಎಂದೆನಿಸುತ್ತಿದೆ.
ದಿನಂಪ್ರತಿ ನೂರಾರು ಕೆಎಸ್ಸಾರ್ಟಿಸಿ ಬಸ್ ಗಳಿಗೆ ಆಸರೆಯಾಗಿರುವ ಬೆಳ್ತಂಗಡಿ ಬಸ್ ನಿಲ್ದಾಣ. 
ಪ್ರಸ್ತುತ ಇರುವ ಬಸ್ ನಿಲ್ದಾಣದ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಮೊದಲೇ ಅವ್ಯವಸ್ಥಿತವಾಗಿದ್ದ ಬೆಳ್ತಂಗಡಿ ಬಸ್ ನಿಲ್ದಾಣ ಈಗ ಇನ್ನಷ್ಟು ಸಮಸ್ಯೆಗಳ ಕೇಂದ್ರವಾಗಿ ಮಾರ್ಪಟ್ಟಿದೆ.  ಪ್ರಯಾಣಿಕರಿಗೆ ಬಸ್ ನಿರೀಕ್ಷಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದರು ಅದು ಇಕ್ಕಟ್ಟಿನ ಸ್ಥಳದಲ್ಲಿದ್ದು ಸ್ವಚ್ಛತೆಯಲ್ಲೂ ತೀರಾ ಹಿಂದುಳಿದಿದೆ.ಮಳೆ ವೇಳೆ ಇಲ್ಲಿ ಹಳ್ಳದಂತೆ ನೀರು ಹರಿಯುತ್ತದೆ.

12ಕೋಟಿ ವೆಚ್ಚದಲ್ಲಿ ಸುಸಜ್ಜಿತ ನಿಲ್ದಾಣದ ಕನಸು
ಸುಮಾರು 1.20 ಎಕರೆ ಸ್ಥಳದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಘೋಷಿಸಲಾಗಿತ್ತು ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆ, ವಿಶ್ರಾಂತಿ ಕೊಠಡಿ, ಪೊಲೀಸ್ ರಕ್ಷಣಾ ವ್ಯವಸ್ಥೆ, ಫೈರ್ ಸೇಫ್ಟಿ, ಶೌಚಾಲಯ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಒಳಗೊಂಡ ನೂತನ ಬಸ್ ನಿಲ್ದಾಣ ಇಲ್ಲಿ ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲಾಗಿತ್ತು. ಎರಡು ವರ್ಷದಲ್ಲಿ ಕಾಮಗಾರಿ ಪೂರಣಗೊಳ್ಳುವ ನಿರೀಕ್ಷೆಯಿತ್ತು. ಆದರೆ ಇನ್ನು ಅದರ ಅಡಿಪಾಯದ ಕಾಮಗಾರಿಯೂ ಪೂರ್ಣಗೊಂಡಿಲ್ಲ.
ರಾಜ್ಯದ ನಾನಾ ಭಾಗಗಳಿಗೆ ಇಲ್ಲಿಂದ ಬಸ್ ಗಳು ಓಡಾಡುತ್ತವೆ. ಸಾವಿರಾರು ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಬೆಳ್ತಂಗಡಿ ಬಸ್ ನಿಲ್ದಾಣ ಪ್ರಮುಖ ಆಶ್ರಯವಾಗಿದೆ. ಆದರೆ ಈಗಿರುವ ಬಸ್ ನಿಲ್ದಾಣದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version