ಬೆಳ್ತಂಗಡಿ; ಶಿಬಾಜೆ ಗ್ರಾಮದ ಆರಂಪಾದೆ ಎಂಬಲ್ಲಿ ಅರಣ್ಯ ಒತ್ತುವರಿ ಮಾಡಿ ಕೃಷಿ ಮಾಡಿದ ಆರೋಪದ ಮೇಲೆ ಅ3ರಂದು ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಇಲ್ಲಿನ ನಿವಾಸಿ ಒ.ಪಿ ಜಾರ್ಜ್ ಎಂಬವರ 1.30ಎಕ್ರೆ ಕೃಷಿ ಭೂಮಿಯ ಕೃಷಿಯನ್ನು ಸಂಪೂರ್ಣ ತೆಗೆದು ಹಾಕಿ ಇದೇ ಜಾಗದಲ್ಲಿ ಗಿಡನೆಡುವ ಕಾರ್ಯ ಮಾಡಿದೆ.
ಶುಕ್ರವಾರ ಬೆಳಗ್ಗೆ ಪುತ್ತೂರು ಎ.ಸಿ.ಎಫ್ ಅವರ ನೇತೃತ್ವದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರು ಹಾಗೂ ತಂಡ ಕಾರ್ಯಾಚರಣೆ ನಡೆಸಿದ್ದು ಬೆಳೆದು ನಿಂತಿದ್ದ ರಬ್ಬರ್ ಮರಗಳನ್ನು ತೆಗೆದು ಹಾಕುವ ಕಾರ್ಯವನ್ನು ಆರಂಭಿಸಿದರು. ಟ್ಯಾಂಪಿಂಗ್ ಮಾಡುವ ರಬ್ಬರ್ ಮರಗಳನ್ನು ಸಂಪೂರ್ಣವಾಗಿ ನೆಲಕ್ಕೆ ಉರುಳಿಸಿ ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಇದೀಗ 1.36 ಎಕ್ರೆ ಜಾಗದ ರಬ್ಬರ್ ಕೃಷಿಯನ್ನು ಸಂಪೂರ್ಣವಾಗಿ ಕಡಿದು ಹಾಕಲಾಗಿದೆ ಕೃಷಿಯನ್ನು ಸಂಪೂರ್ಣ ನಾಶಪಡಿಸಿ ಅಲ್ಲಿ ಅರಣ್ಯ ಇಲಾಖೆಯ ವತಿಯಿಂದ ಗಿಡಗಳನ್ನು ನೆಡಲಾಗಿದ್ದು ಜಮೀನನ್ನು ಇಲಾಖೆ ವಶಕ್ಕೆ ಪಡೆದುಕೊಂಡಿದೆ.
ಒ.ಪಿ ಜಾರ್ಜ್ ಅವರಿಗೆ 2015 ರಲ್ಲಿ ಅಕ್ರಮ ಸಕ್ರಮದಲ್ಲಿ 1.95 ಎಕ್ರೆ ಜಾಗ ಮಂಜೂರಾಗಿತ್ತು ಈ ಜಾಗದಲ್ಲಿ ಅವರು ಈ ಹಿಂದೆಯೂ ಕೃಷಿ ಮಾಡಿಕೊಂಡು ಬಂದಿದ್ದರು. ಮನೆಯನ್ನೂ ಇದೇ ಜಾಗದಲ್ಲಿ ಕಟ್ಟಿಕೊಂಡಿದ್ದಾರೆ. ಅಕ್ರಮ ಸಕ್ರಮದಲ್ಲಿ ಸರಕಾರವೇ ಮಂಜೂರು ಮಾಡಿ ನೀಡಿ ಹತ್ತು ವರ್ಷದ ಬಳಿಕ ಇದೀಗ ಅರಣ್ಯ ಇಲಾಖೆ ಕೃಷಿ ನಾಶಮಾಡಿ ಜಾಗವನ್ನು ವಶಕ್ಕೆ ಪಡೆಯುವ ಕಾರ್ಯ ಮಾಡಿದೆ.
ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರಾದಾಗ ಬೇಕಾದರೆ ಅರಣ್ಯ ಇಲಾಖೆಯಿಂದ ನಿರಪೇಕ್ಷಣೆ ಪಡೆಯುವ ಅಗತ್ಯವಿದೆ. ಅದನ್ನು ಪಡೆದು ಎಲ್ಲ ಅನುಮತಿಗಳನ್ನು ಪಡೆದು ಕಂದಾಯ ಇಲಾಖೆ ಅವರಿಗೆ ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರು ಮಾಡಿತ್ತು ಆದರೆ ಇದೀಗ ಅರಣ್ಯ ಎಂದು ಈ ಸ್ಥಳವನ್ನು ಅರಣ್ಯ ಇಲಾಖೆ ತಮ್ಮ ವಶಕ್ಕೆ ಪಡೆದುಕೊಂಡಿದೆ.

ಎರಡು ವರ್ಷದ ಹಿಂದೆ ಒ.ಪಿ ಜಾರ್ಜ್ ಅವರು ಅರಣ್ಯ ಅಕ್ರಮಣ ಮಾಡಿ ಕೃಷಿ ಮಾಡಿದ್ದು ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಅರಣ್ಯ ಇಲಾಖೆಗೆ ಸೂಚನೆ ನೀಡಿತ್ತು. ಅದರಂತೆ ಇಲಾಖೆ ಅಳತೆ ಮಾಡಿ ಪರಿಶೀಲನೆ ನಡೆಸಿದಾಗ ಇದು ಅರಣ್ಯ ಎಂದು ಕಂಡು ಬಂದಿದ್ದು ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ಅರಣ್ಯ ಇಲಾಖೆಯ ಕಾರ್ಯಾಚರಣೆ ಸ್ಥಳೀಯರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.
ಒತ್ತಡಕ್ಕೆ ಮಣಿದು ಇಲಾಖೆ ಕೃಷಿ ನಾಶ ಮಾಡಿದೆ ಆರೋಪ
ದಶಕಗಳಿಂದ ಇಲ್ಲಿ ನಾವು ಕೃಷಿ ಮಾಡಿಕೊಂಡು ಬಂದಿದ್ದೇವೆ ಸರಕಾರ ಅಕ್ರಮ ಸಕ್ರಮದಲ್ಲಿ ಜಮೀನನ್ನೂ ಮಂಜೂರು ಮಾಡಿಕೊಟ್ಟಿತ್ತು. ಆದರೆ ಇದೀಗ ಅರಣ್ಯ ಇಲಾಖೆ ಏಕಾಏಕಿ ಇಡಿ ರಬ್ಬರ್ ಮರಗಳನ್ನು ಕಡಿದು ಹಾಕಿ ಜಮೀನನ್ನು ವಶಪಡಿಸಿಕೊಂಡಿದೆ. ನಮ್ಮ ಶ್ರಮವೆಲ್ಲವೂ ವಿಫಲವಾಗಿದೆ. ಸೆ28ಕ್ಕೆ ಸಿಸಿಎಫ್ ಈ ಬಗ್ಗೆ ಆದೇಶ ಹೊರಡಿಸಿದ್ದು 7ದಿನಗಳಲ್ಲಿ ತೆರವುಗೊಳಿಸುವಂತೆ ಆದೇಶಿಸಿದ್ದರು. ರಜೆಗಳ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹೋಗಲೂ ಅವಕಾಶ ಸಿಗಲಿಲ್ಲ. ಉದ್ದೇಶ ಪೂರ್ವಕವಾಗಿ ನಮ್ಮ ಜಾಗವನ್ನು ಕಬಳಿಸುವ ಉದ್ದೇಶದಿಂದಲೇ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಇದಿಗ ತೋಟವನ್ನು ನಾಶಪಡಿಸಲಾಗಿದ್ದು ಮನೆ ಇರುವ 56 ಸೆನ್ಸ್ ಜಾಗವೂ ಅರಣ್ಯ ಇಲಾಖೆ ತನಗೆ ಸೇರಿದ್ದು ಎಂದು ಹೇಳುತ್ತಿದೆ. ಈ ಅನ್ಯಾಯದ ವಿರುದ್ದ ನಮ್ಮಿಂದ ಸಾಧ್ಯವಾದಷ್ಟು ಹೋರಾಟ ನಡೆಸುತ್ತೇವೆ
ಒ.ಪಿ ಜಾರ್ಜ್
ಸಂತ್ರಸ್ತ
ಕಾನೂನು ಪಾಲಿಸಿ ಕ್ರಮ ಕೈಗೊಳ್ಳಲಾಗಿದೆ ಎಸಿಎಫ್
ಕಾನೂನು ಪ್ರಕಾರ ಎಲ್ಲ ಕ್ರಮಗಳನ್ನು ಕೈಗೊಂಡು ಶಿಬಾಜೆ ಗ್ರಾಮದಲ್ಲಿ ಅರಣ್ಯ ಒತ್ತುವರಿಯನ್ನು ತೆರವು ಮಾಡಲಾಗಿದೆ. ಸರ್ವೆ ನಂಬರ್ 184 ರಲ್ಲಿ ಅರಣ್ಯ ಜಾಗದಲ್ಲಿ ಅಕ್ರಮ ಮಾಡಿರುವುದು ಕಂಡು ಬಂದಿದೆ. 1.95 ಎಕ್ರೆ ಅರಣ್ಯ ಭೂಮಿಯ ಅಕ್ರಮಣವಾಗಿದ್ದು ಇದರಲ್ಲಿ 1.36ಎಕ್ರೆ ತೆರವುಗೊಳಿಸಲಾಗಿದೆ. ಉಳಿದ 56 ಸೆನ್ಸ್ ಜಾಗದಲ್ಲಿ ಮನೆ ಸೇರಿದಂತೆ ಕೃಷಿ ಇದೆ ಮುಂದಿನ ದಿನಗಳಲ್ಲಿ ಇದನ್ನು ತೆರವು ಗೊಳಿಸಲಾಗುವುದು
ಸುಬ್ಬಯ್ಯ ನಾಯಕ್
ಎಸಿಎಫ್.