


ಧರ್ಮಸ್ಥಳ: ಪ್ರಾಥಮಿಕ ಶಿಕ್ಷಣದಿಂದ ಆರಂಭಗೊಂಡು ಸ್ನಾತಕೋತ್ತರ ಪದವಿ, ವೃತ್ತಿಪರ ಶಿಕ್ಷಣ ಸೇರಿದಂತೆ ಶಿಕ್ಷಣ ಐವತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಮುನ್ನಡೆಸುತ್ತಿರುವ
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ರಾಜ್ಯಾದ್ಯಂತ ಮೌಲ್ಯಾಧಾರಿತ ಶಿಕ್ಷಣ ಒದಗಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ರೀ ಧರ್ಮಸ್ಥಳ ಭಜನಾ ಕಮ್ಮಟದ ಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ೨೭ನೇ ವರ್ಷದ ಭಜನಾ ತರಬೇತಿ ಕಮ್ಮಟದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದಿಂದ ನಡೆಯುವ ವಿದ್ಯಾದಾನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಹೆಗ್ಗಡೆಯವರು ಐಟಿಐ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ, ವೈದ್ಯಕೀಯ, ಇಂಜಿನಿಯರಿಂಗ್ ಅಲ್ಲದೆ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಹೀಗೆ ಹೊಸ ಹೊಸ ಕೋರ್ಸ್ಗಳನ್ನು ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ-ಹೊಸ ಅವಕಾಶಗಳನ್ನು ಸೃಷ್ಟಿಸಿದರು.
ಉಜಿರೆಯಲ್ಲಿ ೫೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಎಸ್.ಡಿ.ಎಂ. ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಮತ್ತು ಧಾರವಾಡದಲ್ಲಿ ಎಸ್.ಡಿ.ಎಂ ವಿಶ್ವವಿದ್ಯಾಲಯವಿದ್ದು, ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಹೀಗೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯು ಪ್ರಸಿದ್ಧವಾಗಿದೆ.
ಭಜನಾ ತರಬೇತಿ ಕಮ್ಮಟವು ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ. ತರಬೇತಿಯಲ್ಲಿ ಶಿಸ್ತು, ಮೌಲ್ಯ, ಸ್ವಚ್ಛತೆ, ವ್ಯವಹಾರ ಇತ್ಯಾದಿಗಳನ್ನು ಅರಿತುಕೊಂಡು ಮುನ್ನಡೆದಾಗ ಬದುಕಿನಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸದಲ್ಲಿ ನಾಡಿನ ವಿವಿಧ ಭಜನಾ ಮಂಡಳಿಗಳಿಂದ ಆಗಮಿಸಿದ ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
