
ಬೆಳ್ತಂಗಡಿ: ಉದ್ಯೋಗ ಸೇಷ್ಟಿಸಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಿ ಎಂಬ ಎಂಬ ಘೋಷಣೆಯೊಂದಿಗೆ ಡಿ.ವೈ.ಎಫ್
ಐ ದ.ಕ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಯುವಜನ ಜಾಥಾಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸೆ. 7ರಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ, ಅವರು ನೆರವೇರಿಸಿ ಮಾತನಾಡುತ್ತಾ ನಮ್ಮ ಜಿಲ್ಲೆಗೆ ಬಂದಿರುವ ಕೈಗಾರಿಕೆಗಳಿಂದಾಗಿ ನಮ್ಮ ನೆಲ,ಜಲ, ವಾಯು ಹಾಳಾಗುತ್ತಿದೆ ಆದರೆ ನಮ್ಮ ಯುವಕರಿಗೆ ಉದ್ಯೋಗಾ ವಕಾಶಗಳು ಮರೀಚಿಕೆಯಾಗಿ ಉಳಿದಿದೆ ಎಂಬುದು ದುರಂತ ಅವಕಾಶಗಳ ಕೊರತೆಯಿಂದಾಗಿ ಯುವ ಸಮುದಾಯ ಅಭದ್ರತೆಯಲ್ಲಿ ಬದುಕುವಂತಾಗಿದೆ. ಡಿವೈಎಫ್.ಐ ಹಮ್ಮಿಕೊಂಡಿರುವ ಈ ಜಾಥಾ ಯುವಜನರನ್ನು ಎಚ್ಚರಗೊಳಿಸುವ ಕಾರ್ಯ ಮಾಡಲಿ ಎಂದರು.
ಡಿವೈಎಫ್ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಪ್ರಕ್ಷುಬ್ದ ವಾತಾವರಣ ಯುವಜನರ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತಿದೆ. ಜಿಲ್ಲೆಯಲ್ಲಿನ ಅಶಾಂತಿಯ ವಾತಾವರಣ ಜಿಲ್ಲೆಯನ್ನು ಅಭಿವೃದ್ದಿಯಿಂದ ಹಿಂದಕ್ಕೆ ಸರಿಸುತ್ತಿದೆ ಉದ್ಯೋಗಗಳು ನಾಶವಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ ಉದ್ಯೋಗಗಳು ಸೃಷ್ಟಿಯಾಗಬೇಕಾದರೆ ಮೊದಲು ಶಾಂತಿ ಸೌಹಾರ್ದತೆ ನೆಲೆಸುವಂತೆ ನೋಡಿಕೊಳ್ಳಬೇಕು ಎಂದರು.
ಡಿವೈಎಫ್.ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಕೋಶಾಧಿಕಾರಿ ಮನೋಜ್ ವಾಮಂಜೂರು, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕಿರಣ ಪ್ರಭ, ಭಾರತ ವಿದ್ಯಾರ್ಥಿ ಸಂಘಟನೆಯ ವಿನುಶ ರಮಣ, ಇನಾಸ್ ಬಿ.ಕೆ, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಅದಿತಿ, ಕಾರ್ಯದರ್ಶಿ ಅಭಿಷೇಕ್ ಬೆಳ್ತಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ಬೆಳ್ತಂಗಡಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ರೈತ ಸಂಘದ ಮುಖಂಡರು ಸುರೇಶ್ ಭಟ್ ವಹಿಸಿದ್ದರು.
ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತನ್ನಿ ಎಂಬ ಬೇಡಿಕೆಯೊಂದಿಗೆ ಬೆಳ್ತಂಗಡಿ ಯಿಂದ ಆರಂಭವಾಗಿರುವ ಯುವಜನ ಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ ಸೆ.9 ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪ ಗೊಳ್ಳಲಿದೆ.