
ಬೆಳ್ತಂಗಡಿ; ಮಹೇಶ್ ಶೆಟ್ಟಿ ತಿಮರೋಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 24ಕೊಲೆಗಳನ್ನು ಮಾಡಿದ್ದಾರೆ ಎಂದು ಹೇಳುತ್ತಿರುವ ವೀಡಿಯೋ ಒಂದು ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ವಿರೋಧ ಪಕ್ಷದ ಸದಸ್ಯರುಗಳು ಸರಕಾರದ ವಿರುದ್ದ ಮಹೇಶ್ ಶೆಟ್ಟಿ ವಿರಯದ್ದ ಮುಗಿಬಿದ್ದು ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸುವಂತೆ ಒತ್ತಾಯವೂ ಸದನದಲ್ಲಿ ಕೇಳಿ ಬಂದಿತ್ತು. ಇದು ಭಾನುವಾರ ಮಹೇಶ್ ಶೆಟ್ಟಿ ನೀಡಿದ ಹೇಳಿಕೆ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಕೊನೆಗೂ ಇದೊಂದು ಹಳೆಯ ವೀಡಿಯೋ ಎಂಬುದು ಬಹಿರಂಗಗೊಂಡಿತ್ತು.
ಇದರ ಸತ್ಯಾಸತ್ಯತೆಯೇನು
ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡುತ್ತಿರುವ ವೀಡಿಯೋದ ಅಸಲಿಯತ್ತೇನು ಎಂಬ ಬಗ್ಗೆ ಪರಿಶೀಲಿಸಿದರೆ ಇದು 2023ರಲ್ಲಿ ವಿಧಾನ ಸಭಾ ಚುನಾವಣೆಯ ಬಳಿಕ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೀಡಿಯೋದ ಒಂದು ತುಣುಕು ಮಾತ್ರ ಇದಾಗಿದೆ. ಶಾಸಕ ಹರೀಶ್ ಪೂಂಜ ಅವರು ವಿಧಾನಸಭಾ ಚುನಾವಣೆಯ ಬಳಿಕ ನಡೆದ ಕಾರ್ಯಕರ್ತರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿ ಸತ್ಯಜಿತ್ ಸುರತ್ಕಲ್ ಮಹೇಶ್ ಶೆಟ್ಟಿ ತಿಮರೋಡಿ ಯಂತಹ ಬಿಜೆಪಿ ಬೆಂಬಲಿಗರಾಗಿದ್ದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಬಗ್ಗೆ ಹೇಳುತ್ತಾ 24ಹಿಂದೂ ಕಾರ್ಯಕರ್ತರನ್ನು ಕೊಂದ ಸಿದ್ದರಾಮಯ್ಯ ಅವರನ್ನು ನೀವು ಬೆಂಬಲಿಸಿದ್ದೀರಲ್ಲ ಎಂದು ಹೇಳಿದ್ದರು. ಇದು ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾಜಿ ಜಿ.ಪಂ ಸದಸ್ಯೆ ನಮಿತ ಪೂಜಾರಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು.
ಶಾಸಕರು ಮಾಡಿದ ಆರೋಪಕ್ಕೆ ಉತ್ತರ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶಾಸಕ ಹರೀಶ್ ಪೂಂಜ ಅವರು ಸಿದ್ದರಾಮಯ್ಯ ಅವರು ಕೊಲೆಗಾರ ಎಂದು ಹೇಳಿದ್ದಾರೆ ನಮ್ಮ ಶಾಸಕರು ಹೇಳಿದ್ದನ್ನು ನಾವು ಒಪ್ಪುತ್ತೇವೆ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲಿ ಇಲ್ಲವಾದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಿ ಎಂಬ ಒತ್ತಾಯವನ್ನು ಮಹೇಶ್ ಶೆಟ್ಟಿ ತಿಮರೋಡಿ ಮಾಡಿದ್ದರು. ಈ ವೀಡಿಯೋವನ್ನು ಇದೀಗ ವೈರಲ್ ಮಾಡಲಾಗುತ್ತಿದೆ.