


ಬೆಳ್ತಂಗಡಿ; ಲಾಯಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸುಗಂಧಿ ಜಗನ್ನಾಥ್ ಇವರ ಮನೆ ರಾತ್ರಿ ತಡ ರಾತ್ರಿ 1.30 ಕುಸಿದಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಸುಗಂಧಿ ಇವರ ಪತಿ ಜಗನ್ನಾಥ್, ಮಗ ಅನಿಲ್, ಸೊಸೆ ಮಧುರ ಪುಟ್ಟ ಮಕ್ಕಳು ಮಲಗಿದ್ದರು. ಗೋಡೆ ಬಿರುಕು ಬಿಟ್ಟ ಶಬ್ದ ಕೇಳಿ ಮನೆಯವರು ಎಚ್ಚರ ಗೊಂಡಿದ್ದರಿಂದ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಸಿತದಿಂದ ಮನೆಯ ನಿತ್ಯ ಬಳಕೆಯ ಸಾಮಗ್ರಿಗಳು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿವೆ. ವಿಷಯ ತಿಳಿದ ತಾಲ್ಲೂಕಿನ ಶಾಸಕರಾದ ಶ್ರೀ ಹರೀಶ್ ಪೂಂಜಾ, ಹಾಗೂ ಸಂಸದರಾದ ಶ್ರೀ ಬ್ರಿಜೇಶ್ ಚೌಟ, ಭೇಟಿ ನೀಡಿ ಕುಸಿತಗೊಂಡಿದ್ದ ಮನೆಯನ್ನು ವೀಕ್ಷಿಸಿದರು.. ಮನೆಯ ಕೂದಲೆಳೆಯ ಅಂತರದಲ್ಲೇ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ಕಂಪ್ರೆಸರ್ ಹಾಗೂ ಬ್ರೇಕರ್ ಮೂಲಕ ಕಪ್ಪು ಕಲ್ಲು ತೆರವು ಮಾಡುತ್ತಿದ್ದ ಸಂದರ್ಭದಲ್ಲಿ ಹಾಗೂ ವೈಬ್ರೇಟರ್ ಒತ್ತಡಕ್ಕೆ ಕಳೆದ ಒಂದು ವರುಷಗಳ ಹಿಂದೆಯೇ ಗೋಡೆಯಲ್ಲಿ ಬಿರುಕು ಮೂಡಿದ್ದು ಈ ಬಗ್ಗೆ ಸಂಬಂಧ ಪಟ್ಟ ಹೆದ್ದಾರಿ ಪ್ರಾಧಿಕಾರಕ್ಕೆ ಮನೆಯವರು ಲಿಖಿತ ರೂಪದಲ್ಲಿ ದೂರು ನೀಡಿದ್ದರು. ಪ್ರಾಧಿಕಾರದ ಅಧಿಕಾರಿಗಳು ಈ ಹಿಂದೆಯೇ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

