

ಬೆಳ್ತಂಗಡಿ: ಪೆರಿಯಶಾಂತಿಯಿಂದ ಧರ್ಮಸ್ಥಳ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ತೆರವುಗೊಳಿಸಲಾಯಿತು.
ಕೊಕ್ಕಡ ಮತ್ತು ಪೆರಿಯಶಾಂತಿ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚುತ್ತಿರುವ ಕಾಡಾನೆಗಳ ಆಕ್ರಮಣದ ಹಿನ್ನಲೆಯಲ್ಲಿ, ಪ್ರಧಾನಮಂತ್ರಿ ಕಾರ್ಯಾಲಯದಿಂದ ಬಂದಿರುವ ಸೂಕ್ತ ಸೂಚನೆ ಮತ್ತು ಸಾರ್ವಜನಿಕರಿಂದ ದಾಖಲಾದ ದೂರುಗಳ ಬೆನ್ನಲ್ಲೇ ಅರಣ್ಯ ಇಲಾಖೆ ತುರ್ತು ಕ್ರಮಕ್ಕೆ ಮುಂದಾಗಿದೆ. ಪೆರಿಯಶಾಂತಿಯ ರಸ್ತೆಬದಿಯಲ್ಲಿ ವ್ಯಾಪಾರಿಗಳು ಬಿಸಾಕಿರುವ ಜೋಳ, ಹಲಸಿನಹಣ್ಣು ಮುಂತಾದ ಆಹಾರತ್ಯಾಜ್ಯಗಳನ್ನು ತಿನ್ನಲು ಆನೆಗಳು ಬರತೊಡಗಿದ್ದು ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ ಈ ಹಿನ್ನೆಲೆಯಲ್ಲಿ, ಅಪಾಯದ ಶಂಕೆಯಿಂದ ಅರಣ್ಯ ಇಲಾಖೆ ತಕ್ಷಣವೇ ಕ್ರಮ ಕೈಗೊಂಡಿದೆ.
ಈ ನಡುವೆ, ಪೆರಿಯಶಾಂತಿಯಿಂದ ಕುದ್ರಾಯವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ನಡೆಸುವ ಗೂಡಂಗಡಿಗಳನ್ನು ಜುಲೈ 15ರೊಳಗೆ ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕೆಂದು ಅಧಿಕಾರಿಗಳು ಆದೇಶಿಸಿದ್ದರು. ಕೆಲವರು ಈ ನಿಟ್ಟಿನಲ್ಲಿ ಸಹಕಾರ ನೀಡಿದರೂ, ಬಹುತೇಕರು ನಿರ್ಲಕ್ಷ್ಯ ತೋರಿದ್ದರು. ಸೋಮವಾರ ಬೆಳಗ್ಗಿನಿಂದಲೇ ವ್ಯಾಪಾರಸ್ಥರು ಅಂಗಡಿಗಳನ್ನು ಸ್ವಪ್ರೇರಿತವಾಗಿ ತೆರವುಗೊಳಿಸಲು ಮುಂದಾಗಿದ್ದಾರೆ.
ಅರಣ್ಯ ಇಲಾಖೆ, ಪೊಲೀಸರು ಮತ್ತು ಸ್ಥಳೀಯ ಸಿಬ್ಬಂದಿಗಳ ಸಮ್ಮುಖದಲ್ಲಿ ಸುಮಾರು 55 ರಿಂದ 60 ಅಂಗಡಿಗಳು ತೆರವುಗೊಂಡಿದ್ದು, ಕೆಲವರು ಈಗಾಗಲೇ ಅಂಗಡಿಗಳನ್ನು ಮುಚ್ಚಿದ್ದರೂ, ಅವರಿಂದ ಬಿಟ್ಟುಹೋಗಿದ್ದ ವಸ್ತುಗಳನ್ನು ಇಲಾಖೆಯ ಸಿಬ್ಬಂದಿಯೇ ತೆರವುಗೊಳಿಸಿದರು.

ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪವಲಯ ಅಧಿಕಾರಿಗಳಾದ ಶಿವಾನಂದ ಆಚಾರ್ಯ, ಭವಾನಿಶಂಕರ, ಯತೀಂದ್ರ, ರಾಜೇಶ್, ಹಾಗೂ ರಕ್ಷಣಾ ಸಿಬ್ಬಂದಿಗಳಾದ ಶಿವಾನಂದ ಕುದುರಿ, ಚಂದ್ರು, ವಿನಯಚಂದ್ರ ಆಳ್ವ, ದಿವಾಕರ ರೈ, ವೀಕ್ಷಕರಾದ ದಾಮೋದರ ಪೂಜಾರಿ, ದಿನೇಶ್ ಮತ್ತು ಚಾಲಕರಾದ ಕಿಶೋರ್ ಹಾಗೂ ತೇಜಕುಮಾರ್ ಪಾಲ್ಗೊಂಡಿದ್ದರು.
