ಬೆಳ್ತಂಗಡಿ; ತಾಲೂಕಿನ ನಾವೂರು, ಕಡಿರುದ್ಯಾವರ, ಮುಂಡಾಜೆ, ಚಾರ್ಮಾಡಿ, ಚಿಬಿದ್ರೆ , ತೋಟತ್ತಾಡಿ, ನೆರಿಯ, ಕಳೆಂಜ, ಪುದುವೆಟ್ಟು, ಧರ್ಮಸ್ಥಳ , ರೆಖ್ಯ , ಶಿಬಾಜೆ ಮತ್ತು ಆಸುಪಾಸಿನ ಗ್ರಾಮಗಳ ನಾಗರಿಕರಿಗೆ ಕಾಡನೆ ದಾಳಿಯಿಂದಾಗಿ ತೀವ್ರ ಸಮಸ್ಯೆ ಎದುರಾಗಿದ್ದು ಕಾಡಾನೆ ಹಾವಳಿಗೆ ಸೂಕ್ತ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರ ವನ್ನು ಒತ್ತಾಯಿಸುವ ಸಲುವಾಗಿ ಕೆ.ಎಸ್.ಎಂ.ಸಿ.ಎ ವತಿಯಿಂದ ಸಮಾಲೋಚನಾ ಸಭೆಯನ್ನು ತೋಟತ್ತಾಡಿ ಸೈಟ್ ಆಂಟನಿ ಫೊರೊನಾ ಚರ್ಚ್ ನಲ್ಲಿ ನಡೆಸಲಾಯಿತು. ಧರ್ಮಕೇಂದ್ರದ ಸಹಧರ್ಮಗುರುಗಳಾದ ವಂದನೀಯ ಫಾದರ್ ಮ್ಯಾಥ್ಯೂ ಮಣಪ್ಪಾಟ್, ಕರ್ನಾಟಕ ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂ, ಜಾಗತಿಕ ಕೆಥೋಲಿಕ್ ಕಾಂಗ್ರೇಸ್ ನ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್ , ಸಮಿತಿಯ ಪ್ರಧಾನ ಕಾರ್ಯದರ್ಶಿ ಸೆಬಾಸ್ಟಿಯನ್ ಏಮ್ ಜೆ ಮಲಯಾ ಟ್ಟಿಲ್, ಪಿ.ಆರ್.ಒ ಸೆಬಾಸ್ಟಿಯನ್ ಪೊಕ್ಕoತಾಡಿ , ಪೋರೊನಾ ಅಧ್ಯಕ್ಷರಾದ ಸೆಬಾಸ್ಟಿಯನ್ ಟೋಮಿ ವೈಪನ ಹಾಗೂ ಇತರರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಪಾಲ್ಗೊಂಡವರ ಒಮ್ಮತದ ಅಭಿಪ್ರಾಯದಂತೆ ಕಾಡಾನೆ ಹಾವಳಿ ಮಾತ್ರವಲ್ಲದೆ, ವನ್ಯಜೀವಿಗಳಾದ ಹಂದಿ, ಚಿರತೆ, ಮಂಗ, ಹಾವು ಹಾಗು ನವಿಲು ವಿಪರೀತವಾಗಿ ಹೆಚ್ಚಾಗಿ ಕಂಡುಬರುತ್ತದೆ. ಇದು ಇಲ್ಲಿನ ಪ್ರಾದೇಶಿಕ ಆವಾಸ ವ್ಯವಸ್ಥೆಯ ಅಸಮತೋಲನವನ್ನು ಸೂಚಿಸುತ್ತದೆ . ಈ ಕುರಿತಾಗಿ ಹೆಚ್ಚಿನ ಅಧ್ಯಯನವನ್ನು ಮಾಡಿ ಅಗತ್ಯ ಬಂದರೆ ಜನವಸತಿ ಪ್ರದೇಶದಲ್ಲಿನ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಸರಕಾರದ ಮಟ್ಟದಲ್ಲಿ ಕಾನೂನು ತಿದ್ದುಪಡಿ ತರಲೂ ಜನಾಭಿಪ್ರಾಯ ರೂಪಿಸಲು ಸಾಧ್ಯವಾಗುವಂತೆ ತಾಲೂಕಿನ ಎಲ್ಲಾ ನಾಗರಿಕರನ್ನು ಸೇರಿಸಿಕೊಂಡು ಜನಾಂದೋಲನವನ್ನು ರೂಪಿಸಲು ತೀರ್ಮಾನಿಸಲಾಯಿತು.

