Home ರಾಜಕೀಯ ಸಮಾಚಾರ ಪಕ್ಷ ವಿರೋಧಿ ಚಟುವಟಿಕೆ ಶಾಹುಲ್ ಹಮೀದ್ ಹಾಗೂ ಮಾಜಿ ಮೇಯರ್ ಅಶ್ರಫ್ ಗೆ ಕಾಂಗ್ರೆಸ್ ಪಕ್ಷದಿಂದ...

ಪಕ್ಷ ವಿರೋಧಿ ಚಟುವಟಿಕೆ ಶಾಹುಲ್ ಹಮೀದ್ ಹಾಗೂ ಮಾಜಿ ಮೇಯರ್ ಅಶ್ರಫ್ ಗೆ ಕಾಂಗ್ರೆಸ್ ಪಕ್ಷದಿಂದ ಕಾರಣ ಕೇಳಿ ನೋಟೀಸ್

37
0

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮುಸ್ಲಿಮರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡರು ಇತ್ತೀಚೆಗೆ ನಗರದಲ್ಲಿ ಸಭೆ ನಡೆಸಿ ರಾಜ್ಯ ಸರಕಾರ, ಮತ್ತು ಪಕ್ಷದ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಕೆ.ಶಾಹುಲ್‌ ಹಮೀದ್ ಮತ್ತು ಮಾಜಿ ಮೇಯರ್ ಕೆ. ಅಶ್ರಫ್ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿದೆ.

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್‌ರ ನಿರ್ದೇಶನದಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಡಿ. ವಿಕಾಸ್ ಶೆಟ್ಟಿ ಶನಿವಾರ ಈ ಇಬ್ಬರು ಮುಖಂಡರಿಗೆ ನೀಡಿದ ನೋಟಿಸ್‌ನಲ್ಲಿ ಒಂದು ವಾರದೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಅಬ್ದುಲ್ ರಹ್ಮಾನ್ ಕೊಲೆಯ ನಂತರ ಜಿಲ್ಲೆಯ ಜನತೆ ಆತಂಕಕ್ಕೆ ಈಡಾಗಿದ್ದಾರೆ. ಈ ಸಂದರ್ಭ ಪಕ್ಷದ ಜವಾಬ್ದಾರಿಯುತ ನಾಯಕರು ಸಾರ್ವಜನಿಕರು, ಕಾರ್ಯಕರ್ತರು, ಅಲ್ಪಸಂಖ್ಯಾತರಿಗೆ ಧೈರ್ಯ ತುಂಬಬೇಕಾಗಿತ್ತು. ಆದರೆ ತಾವು ಅಲ್ಪಸಂಖ್ಯಾತರ ಸಭೆಯನ್ನು ಏರ್ಪಡಿಸುವ ವಿಚಾರ ತಿಳಿದ ನಾಯಕರು ತಮಗೆ ದೂರವಾಣಿ ಮುಖಾಂತರ ಯಾವುದೇ ಸಭೆ ನಡೆಸದಂತೆ, ಪಕ್ಷಕ್ಕೆ ರಾಜೀನಾಮೆ ವಿಚಾರವಾಗಿ ಯಾವುದೇ ದುಡುಕಿನ ಕ್ರಮಕೈಗೊಳ್ಳಬಾರದು, ಎಲ್ಲವನ್ನೂ ಸರಕಾರ ನಿಭಾಯಿಸುತ್ತಿದೆ ಎಂಬುದಾಗಿ ತಿಳಿಸಿದ್ದರೂ ಕೂಡ ನೀವು ಸಭೆ ನಡೆಸಿ ಅಲ್ಪಸಂಖ್ಯಾತರಿಂದ ಪಕ್ಷಕ್ಕೆ ರಾಜೀನಾಮೆ ಕೊಡಿಸಿರುವುದಾಗಿ ಹೇಳಿದ್ದೀರಿ. ಇದು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವ ಪ್ರಕರಣವಾಗಿದೆ. ಹಾಗಾಗಿ ತಾವು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಪಕ್ಷದ ಶಿಸ್ತಿಗೆ ವಿರುದ್ಧವಾಗಿ ವರ್ತಿಸಿರುತ್ತೀರಿ. ಪಕ್ಷದ ನಾಯಕರ ಹೇಳಿಕೆಯನ್ನೂ ನಿರ್ಲಕ್ಷಿಸಿರುತ್ತೀರಿ. ಆದುದರಿಂದ ಈ ವಿಚಾರವನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ. ತಾವು ಪಕ್ಷದ ಶಿಸ್ತಿಗೆ ವಿರುದ್ಧವಾಗಿರುವುದರಿಂದ ಯಾಕೆ ತಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಾರದು ಎಂದು ಕೆ.ಕೆ.ಶಾಹುಲ್ ಹಮೀದ್‌ಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಪರಿಸ್ಥಿತಿಯ ಅವಲೋಕನಕ್ಕೆ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡುವಾಗ ತಾವು ಉಸ್ತುವಾರಿ ಸಚಿವರನ್ನು ಯಾರೂ ಭೇಟಿ ಮಾಡಬಾರದು ಎಂದು ಹೇಳಿಕೆ ನೀಡಿರುತ್ತೀರಿ ಮತ್ತು ಸಚಿವರ ಬಗ್ಗೆ ಕೇವಲವಾಗಿ ಮಾತನಾಡಿರುತ್ತೀರಿ. ಉಸ್ತುವಾರಿ ಸಚಿವರು ರಾಜ್ಯ ಸರಕಾರದ ಜವಾಬ್ದಾರಿಯುತ ಪ್ರತಿನಿಧಿಯಾಗಿದ್ದು, ಪಕ್ಷದ ಹಿರಿಯ ಮುಖಂಡರೂ ಆಗಿರುತ್ತಾರೆ. ತಮ್ಮ ಹೇಳಿಕೆ ಪಕ್ಷಕ್ಕೆ ಮುಜುಗರವನ್ನುಂಟು ಮಾಡುವುದಾಗಿದೆ. ಪಕ್ಷದ ಶಿಸ್ತಿಗೆ ವಿರುದ್ಧವಾಗಿರುತ್ತದೆ. ಇದು ಗಂಭೀರ ವಿಚಾರವಾಗಿರುವುದರಿಂದ ಯಾಕೆ ತಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here