
ಬೆಳ್ತಂಗಡಿ; ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ನದಿಗಳು ತುಂಬಿ ಹರಿಯುತ್ತಿದೆ. ದಿನವಿಡೀ ಸುರಿದ ಮಳೆಯಿಂದಾಗಿ ಜನ ಜೀವವನ ಅಸ್ತವ್ಯಸ್ತಗೊಂಡಿದೆ.
ಹಲವೆಡೆ ತೋಟಗಳಿಗೆ ನೀರು ನುಗ್ಗಿದ್ದು ರಾತ್ರಿಯೂ ಮುಂದುವರಿದ ಮಳೆ ಜನರಲ್ಲಿ ಆತಂಕ ಮೂಡಿಸಿದೆ.
ತಾಲೂಕಿನಲ್ಲಿ ಭಾರೀ ಮಳೆಗೆ ಹಲವೆಡೆ ಭೂಕುಸಿತಗಳಾಗಿದ್ದು ಮನೆಗಳು ಅಪಾಯದಲ್ಲಿದೆ.
ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿನ ನಿವಾಸಿ ವಸಂತಿ ಎಂಬವರ ಮನೆಯ ಹಿಂಬದಿಯ ಗುಡ್ಡ ಕುಸಿದಿದ್ದು ಮನೆಯ ಹಿಂಭಾಗಕ್ಕೆ ಹಾಗೂ ಕೊಟ್ಟಿಗೆಗೆ ಹಾನಿ ಸಂಭವಿಸಿದೆ.
ನಾವೂರು ಗ್ರಾಮದ ಕಾರ್ಮಿನಡ್ಕ ಎಂಬಲ್ಲಿ ದೇಜಪ್ಪ ಶೆಟ್ಟಿಗಾರ್ ಎಂಬವರ ಮನೆಯ ಸಮೀಪ ಮಣ್ಣು ಕುಸಿದು ಬಿದ್ದಿದೆ ವಾಸ್ತವ್ಯದ ಮನೆಗೆ ಹೆಚ್ಷಿನ ಹಾನಿಯಾಗಿರುವುದಿಲ್ಲ.
ನಾವೂರು ಗ್ರಾಮದ ನವ ಗ್ರಾಮ ಜನತಾ ಕಾಲೊನಿ ನಿವಾಸಿ ಅಬೂಬಕ್ಕರ್ ಅವರ ಮನೆಯ ಬಳಿ ಮಣ್ಣು ಕುಸಿದಿದ್ದು ಮನೆ ಅಪಾಯದಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಕುಟುಂಬವನ್ನು ಸಂಬಂಧಿಕರ ಮನೆಗೆ ತೆರಳುವಂತೆ ಸೂಚಿಸಲಾಗಿದೆ.
ಶಿರ್ಲಾಲು ಗ್ರಾಮದ ದರ್ಬೆ ಎಂಬಲ್ಲಿ ಗಾಳಿ ಮಳೆಯಿಂದ ಮನೆಗೆ ಹಾನಿ ಸಂಭವಿಸಿದೆ.