Home ಅಪರಾಧ ಲೋಕ ಉಜಿರೆಯಲ್ಲಿ ಅಂತಾರಾಷ್ಟ್ರೀಯ ಯೋಗ& ಪ್ರಕೃತಿ ಚಿಕಿತ್ಸಾ ಸಮ್ಮೇಳನ; ಪ್ರಕೃತಿ ‌ಚಿಕಿತ್ಸೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ;...

ಉಜಿರೆಯಲ್ಲಿ ಅಂತಾರಾಷ್ಟ್ರೀಯ ಯೋಗ& ಪ್ರಕೃತಿ ಚಿಕಿತ್ಸಾ ಸಮ್ಮೇಳನ; ಪ್ರಕೃತಿ ‌ಚಿಕಿತ್ಸೆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ; ಡಾ. ಹೆಗ್ಗಡೆ

0

ಬೆಳ್ತಂಗಡಿ: ನಮ್ಮ ದೇಶದ ಪ್ರಾಚೀನ ಪಾರಂಪರಿಕ ಚಿಕಿತ್ಸಾ ವಿಧಾನವಾದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಯೆ ಈಗ ಜನರಿಗೆ ನಂಬಿಕೆ ಮತ್ತು ವಿಶ್ವಾಸ ಮೂಡಿ ಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಯೆ ಮೂರನೆ ಅಂತಾರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದಲ್ಲೆ ಪ್ರಥಮವಾಗಿ ಉಜಿರೆಯಲ್ಲಿ ಎಸ್.ಡಿ.ಎಂ. ಮತ್ತು ಯೋಗ ವಿಜ್ಞಾನದಲ್ಲಿ ಪದವಿ ಕಾಲೇಜನ್ನು ಹಾಗೂ ಧರ್ಮಸ್ಥಳದಲ್ಲಿ ಶಾಂತಿವನದಲ್ಲಿ ಪ್ರಕೃತಿಚಿಕಿತ್ಸಾ ಆಸ್ಪತ್ರೆಯನ್ನು ಪ್ರಾರಂಭಿಸಿದ್ದು ಈಗ ಜನರಿಗೆ ಔಷಧಿ ರಹಿತ ಚಿಕಿತ್ಸಾ ಪದ್ಧತಿ ಬಗ್ಯೆ ವಿಶ್ವಾಸ ಮೂಡಿಬಂದಿದೆ. ಇಲ್ಲಿ ಕಲಿತ ಸಾವಿರಾರು ಹಿರಿಯ ವಿದ್ಯಾರ್ಥಿಗಳು ಇಂದು ವಿಶ್ವದೆಲ್ಲೆಡೆ ಸಂಸ್ಥೆಯ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಿಸದ್ದು ಜನರ ಪ್ರೀತಿ, ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೆಗ್ಗಡೆಯವರು ಹೇಳಿದರು.

ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ಬೆಂಗಳೂರಿನ ಎಸ್ ವ್ಯಾಸ್ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್. ಆರ್. ನಾಗೇಂದ್ರ ಮಾತನಾಡಿ, ಮಾಹಿತಿಯ ಕೊರತೆ, ಆಧುನಿಕ ಜೀವನಶೈಲಿ ಹಾಗೂ ಆಹಾರ-ವಿಹಾರದ ವಿಧಾನದಿಂದ ಇಂದು ಜನರು ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಏಡ್ಸ್ ಮೊದಲಾದ ಭೀಕರ ರೋಗಗಳಿಗೆ ಬಲಿಯಾಗುತ್ತಾರೆ. ಅಲೋಪತಿ, ಪ್ರಾಚೀನ ಪಾರಂಪರಿಕ ಚಿಕಿತ್ಸಾ ಪದ್ಧತಿ ಹಾಗೂ ಆಧುನಿಕ ಸಂಶೋಧನೆಗಳ ಫಲಿತಾಂಶವನ್ನು ಅಳವಡಿಸಿ ರೋಗ ಗುಣಪಡಿಸಲು ಸಮಗ್ರತೆಯ ಚಿಕಿತ್ಸಾ ಪದ್ಧತಿ ಅಳವಡಿಸಬೇಕು ಎಂದು ಅವರು ಸಲಹೆ ನೀಡಿದರು. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಿಂದ ದೇಹದ ರೋಗ ನಿರೋಧಕಶಕ್ತಿ ವೃದ್ಧಿಸಿಕೊಂಡು ಆರೋಗ್ಯಭಾಗ್ಯ ಹೊಂದಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ಶುಭ ಹಾರೈಸಿದರು.
ಬೆಂಗಳೂರಿನ ಎಸ್ ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಆರ್. ನಾಗೇಂದ್ರ ಅವರಿಗೆ “ಜೀವಮಾನದ ವಿಶೇಷ ಸಾಧಕ” ಪುರಸ್ಕಾರ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಡಾ. ನವೀನ್ ಕೆ.ವಿ., ಡಾ. ಬಾಬು ಜೋಸೆಫ್, ಡಾ. ಮಂಜುನಾಥ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದು ಶುಭಾಶಂಸನೆ ಮಾಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಸ್ವಾಗತಿಸಿದರು.
ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ ಶೆಟ್ಟಿ ಧನ್ಯವಾದವಿತ್ತರು.
ಡಾ. ಬಿಂದು, ಡಾ. ದೀಪಿಕಾ, ಕುಮಾರಿ ಅನನ್ಯಾ ಮತ್ತು ಕುಮಾರಿ ಪ್ರತೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version