



ನವದೆಹಲಿ: ಕ್ಷಿಪ್ರ ರಾಜತಾಂತ್ರಿಕ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಓ) ಇಂದು ನಡೆಸಿದ ಮಾತುಕತೆಯ ಫಲವಾಗಿ. ಉಭಯ ದೇಶಗಳ ಗಡಿಯಲ್ಲಿ ಭೂ. ವಾಯು ಮತ್ತು ಸಮುದ್ರ ಮಾರ್ಗಗಳಲ್ಲಿ ಎಲ್ಲಾ ರೀತಿಯ ಗುಂಡಿನ ದಾಳಿ ಹಾಗೂ ಸೇನಾ ಕಾರ್ಯಾಚರಣೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಮಹತ್ವದ ಒಪ್ಪಂದಕ್ಕೆ ಬರಲಾಗಿದೆ. ಈ ಒಪ್ಪಂದವು ಭಾರತೀಯ ಕಾಲಮಾನ ಸಂಜೆ 5 ಗಂಟೆಯಿಂದ ಜಾರಿಗೆ ಬಂದಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಅವರು ಪ್ರಕಟಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಕ್ರಮ್ ಮಿಸ್ತ್ರಿ ಅವರು, “ಪಾಕಿಸ್ತಾನದ ಡಿಜಿಎಂಓ ಅವರು ಇಂದು ಮಧ್ಯಾಹ್ನ 3:35 ಗಂಟೆಗೆ ಭಾರತದ ಡಿಜಿಎಂಓ ಅವರಿಗೆ ಕರೆ ಮಾಡಿದರು. ಭೂಮಿ. ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳನ್ನು ಭಾರತೀಯ ಕಾಲಮಾನ ಸಂಜೆ 5 ಗಂಟೆಯಿಂದ ನಿಲ್ಲಿಸಲು ಉಭಯ ಕಡೆಗಳಲ್ಲಿ ಒಪ್ಪಿಗೆಯಾಗಿದೆ. ಈ ತಿಳುವಳಿಕೆಯನ್ನು ಜಾರಿಗೆ ತರಲು ಎರಡೂ ಕಡೆಯವರಿಗೆ ಇಂದು ಸೂಚನೆಗಳನ್ನು ನೀಡಲಾಗಿದೆ. ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು ಮೇ 12 ರಂದು ಮಧ್ಯಾಹ್ನ 12 ಗಂಟೆಗೆ ಮತ್ತೆ ಮಾತುಕತೆ ನಡೆಸಲಿದ್ದಾರೆ.” ಎಂದು ವಿವರಿಸಿದರು.
ಇದಕ್ಕೂ ಮುನ್ನ, ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೂ ಸಹ ಟ್ವಿಟ್ ಮೂಲಕ ಈ ತಿಳುವಳಿಕೆಯನ್ನು ದೃಢಪಡಿಸಿದ್ದರು. “ಭಾರತ ಮತ್ತು ಪಾಕಿಸ್ತಾನ ಇಂದು ಗುಂಡಿನ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸುವ ಕುರಿತು ಒಂದು ತಿಳುವಳಿಕೆಯನ್ನು ಮಾಡಿಕೊಂಡಿವೆ.” ಎಂದು ಅವರು ಹೇಳಿದ್ದರು.
ಭಯೋತ್ಪಾದನೆಯ ವಿಷಯದಲ್ಲಿ ಭಾರತದ ನಿಲುವನ್ನು ಪುನರುಚ್ಚರಿಸಿದ ಸಚಿವ ಜೈಶಂಕರ್, “ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಭಾರತವು ಸ್ಥಿರವಾಗಿ ದೃಢ ಮತ್ತು ರಾಜಿರಹಿತ ನಿಲುವನ್ನು ಹೊಂದಿದೆ. ಅದನ್ನು ಮುಂದೆಯೂ ಮುಂದುವರಿಸಲಿದೆ.” ಎಂದು ಸ್ಪಷ್ಟಪಡಿಸಿದ್ದರು.
ಈ ಬೆಳವಣಿಗೆಯು ಉಭಯ ದೇಶಗಳ ನಡುವಿನ ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಹೆಜ್ಜೆಯಾಗಿದ್ದು, ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಅಮೇರಿಕಾ ಮಧ್ಯಸ್ಥಿಕೆ;
ಕಳೆದ 3 ದಿನಗಳಿಂದ ಭಾರತ ಮತ್ತು ಪಾಕ್ ನಡುವೆ ನಡೆಯುತ್ತಿರುವ ಸೇನಾ ಸಂಘರ್ಷವನ್ನು ಗಮನಿಸಿದ ಆಮೇರಿಕಾವು ಎರಡು ದೇಶಗಳ ಮಧ್ಯೆ ಮದ್ಯಸ್ಥಿಕೆ ನಡೆಸಿ 2 ದೇಶಗಳನ್ನು ಕದನ ವಿರಾಮಕ್ಕೆ ಒಪ್ಪಿಸಿತ್ತು. ಈ ಕುರಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ ಮಾಡಿದ್ದು. ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದೆ. ದೀರ್ಘ ರಾತ್ರಿಯ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಭಾರತ ಪಾಕಿಸ್ತಾನ ಎರಡೂ ರಾಷ್ಟ್ರಗಳು “ಸಾಮಾನ್ಯ ಜ್ಞಾನ ಮತ್ತು ಉತ್ತಮ ಬುದ್ಧಿವಂತಿಕೆ” ತೋರಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ದಿನಗಟ್ಟಲೆ ಉಲ್ಬಣಗೊಳ್ಳುತ್ತಿದ್ದ ಮಿಲಿಟರಿ ಸಂಘರ್ಷದ ನಂತರ ಯುದ್ಧವನ್ನು ನಿಲ್ಲಿಸಿ ಶಾಂತತೆಯನ್ನು ಪುನಃಸ್ಥಾಪಿಸುವ ಎರಡೂ ದೇಶಗಳ ನಿರ್ಧಾರವನ್ನು ಅವರು ಶ್ಲಾಘಿಸಿದರು.
ಈ ಬಗ್ಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಟ್ವಿಟ್ ಮಾಡಿದ್ದು.
“ಕಳೆದ 18 ಗಂಟೆಗಳಲ್ಲಿ ಅಮೆರಿಕದ ಉಪಾಧ್ಯಕ್ಷ ವ್ಯಾನ್ಸ್ ಮತ್ತು ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೋವಲ್ ಮತ್ತು ಅಸಿಮ್ ಮಲಿಕ್ ಸೇರಿದಂತೆ ಹಿರಿಯ ಭಾರತೀಯ ಮತ್ತು ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಮತ್ತು ತಟಸ್ಥ ಸ್ಥಳದಲ್ಲಿ ವ್ಯಾಪಕವಾದ ವಿಷಯಗಳ ಕುರಿತು ಮಾತುಕತೆಗಳನ್ನು ಪ್ರಾರಂಭಿಸಲು ಒಪ್ಪಿಕೊಂಡಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ.
ಶಾಂತಿಯ ಮಾರ್ಗವನ್ನು ಆಯ್ಕೆ ಮಾಡುವಲ್ಲಿ ಪ್ರಧಾನಿ ಮೋದಿ ಮತ್ತು ಷರೀಫ್ ಅವರ ಬುದ್ಧಿವಂತಿಕೆ. ವಿವೇಕ ಮತ್ತು ರಾಜತಾಂತ್ರಿಕತೆಯನ್ನು ನಾವು ಶ್ಲಾಘಿಸುತ್ತೇವೆ” ಎಂದು ಹೇಳಿದ್ದಾರೆ.
