
ಮಂಗಳೂರು: ಬಜಪೆಯ ಸುಹಾಸ್ ಶೆಟ್ಟಿ ಕೊಲೆಗೆ ಈ ಹಿಂದೆ ಹತ್ಯೆಯಾಗಿದ್ದ ಫಾಜಿಲ್‌ನ ಸಹೋದರ ಸಹಾಯ ಮಾಡಿದ್ದ ಎಂಬ ವಿಚಾರವನ್ನು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಬಹಿರಂಗಪಡಿಸಿದ್ದಾರೆ.
ಮೇ 1ರ ರಾತ್ರಿ ಆರು ಜನ ಸೇರಿ ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್. ಆತನ ಮೇಲೆ 2023ರಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು, ಇದರ ಪ್ರತೀಕಾರಕ್ಕೆ ಫಾಜಿಲ್ ನ ತಮ್ಮನ ಸಹಾಯ ಪಡೆದು ಸುಹಾಸ್ ನ ಕೊಲೆ ಮಾಡಿದ್ದ ಎಂದರು.
ಪೇಜಾವರ ಶಾಂತಿಗುಡ್ಡೆ ನಿವಾಸಿ, ಬಜಪೆ ಕಿನ್ನಿಪದವಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಡ್ರೈವರ್ ಅಬ್ದುಲ್ ಸಫ್ವಾನ್ (29), ಮೇಸ್ತಿ ಕೆಲಸ ಮಾಡಿಕೊಂಡಿದ್ದ ಶಾಂತಿಗುಡ್ಡೆ ನಿವಾಸಿ ನಿಯಾಜ್ (28), ಕೆಂಜಾರು ನಿವಾಸಿ ಮೊಹಮ್ಮದ್ ಮುಝಮಿಲ್ (32), ಕಳವಾರು ನಿವಾಸಿ ಕಲಂದರ್ ಶಾಫಿ (31), ಡ್ರೈವಿಂಗ್ ಕೆಲಸ ಮಾಡುತ್ತಿದ್ದ ಕಳಸ ನಿವಾಸಿ ರಂಜಿತ್ (19), ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಳಸದ ನಾಗರಾಜ್ (20), ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ (28) ಮತ್ತು ಅದಿಲ್ ಮೆಹರೂಫ್ ಬಂಧಿತರು.
ಸಫ್ವಾನ್ ಮೇಲೆ 2023ರಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್, ಧನರಾಜ್ ಸೇರಿ ಸಫ್ವಾನ್ ಮೇಲೆ ಹಲ್ಲೆ ಮಾಡಿದ್ದರು. ಸಫ್ವಾನ್ ಗೆ ಸುಹಾಸ್ ಕೊಲೆ ಮಾಡುವ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುಹಾಸ್ ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ. ಇದೇ ವೇಳೆ ಹತ್ಯೆಯಾಗಿದ್ದ ಫಾಜಿಲ್ ನ ತಮ್ಮನನ್ನು ಸಂಪರ್ಕಿಸಿ ಸುಹಾಸ್ ನನ್ನು ಕೊಲೆ ಮಾಡುವ ಯೋಜನೆ ಮಾಡಿದ್ದಾರೆ ಎಂದು ಹೇಳಿದರು.
ಸುಹಾಸ್ ಕೊಲೆಗಾಗಿ 5 ಲಕ್ಷ ರೂಪಾಯಿ ನೀಡುವುದಾಗಿ ಫಾಜಿಲ್‌ನ ತಮ್ಮ ಆದಿಲ್ ಮೆಹರೂಫ್ ಭರವಸೆ ನೀಡಿದ್ದ. ಅದರಂತೆ ಮೂರು ಲಕ್ಷ ಅಡ್ವಾನ್ಸ್ ನೀಡಿದ್ದಾನೆ, ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ವಾನ್ ತಯಾರಿ ಮಾಡಿದ್ದಾನೆ ಎಂದು ಮಾಹಿತಿ ನೀಡಿದರು.
ನಿಯಾಜ್ ನ ಇಬ್ಬರು ಸ್ನೇಹಿತರಾದ, ಕಳಸ ಮೂಲದ ನಾಗಾರಾಜ್ ಮತ್ತು ರಂಜಿತ್ ನನ್ನು ಸಂಪರ್ಕಿಸಿದ್ದು, ಈ ಇಬ್ಬರು ಎರಡು ದಿನಗಳಿಂದ ಸಫ್ವಾನ್ ಮನೆಯಲ್ಲಿ ವಾಸವಾಗಿದ್ದರು. ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
.