Home ರಾಜಕೀಯ ಸಮಾಚಾರ ಭಾರತದ ಮುಸ್ಲಿಮರು ಮೌನ ಪಾಲಿಸಿದರೆ ಬಾಬರಿ ಮಸೀದಿಯಂತೆ ವಕ್ಫ್ ಆಸ್ತಿಯನ್ನು ಕಳೆದುಕೊಳ್ಳುವ ದಿನ ದೂರವಿಲ್ಲ ಅನ್ವರ್...

ಭಾರತದ ಮುಸ್ಲಿಮರು ಮೌನ ಪಾಲಿಸಿದರೆ ಬಾಬರಿ ಮಸೀದಿಯಂತೆ ವಕ್ಫ್ ಆಸ್ತಿಯನ್ನು ಕಳೆದುಕೊಳ್ಳುವ ದಿನ ದೂರವಿಲ್ಲ ಅನ್ವರ್ ಸಾದತ್

0

ಬೆಳ್ತಂಗಡಿ; ಸಮುದಾಯಕ್ಕಿರುವ ಶಾಸನಬದ್ಧ ಹಕ್ಕುಗಳನ್ನು ನಿರಾಕರಿಸುವಾಗ ನಮ್ಮ ಹಕ್ಕುಗಳಿಗಾಗಿ ಸಂವಿಧಾನಾತ್ಮಕವಾದ ಹೋರಾಟಗಳಿಗೆ ಹೆಜ್ಜೆ ಹಾಕದೆ ಮೌನ ವಹಿಸಿದರೆ ಬಾಬರಿ ಮಸೀದಿಯಂತೆ ನಮ್ಮ ವಕ್ಫ್ ಆಸ್ತಿಗಳನ್ನು ನಾವು ಕಳೆದು ಕೊಳ್ಳುವ ದಿನ ದೂರವಿಲ್ಲ ಎಂದು ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಎಸ್.ಡಿ.ಪಿ.ಐ ವತಿಯಿಂದ ನಡೆದ ಮರ್ಹೂಂ ಹೈದರ್ ನೀರ್ಸಾಲ್ ಸ್ಮರಣಾರ್ಥ ಇಫ್ತಾರ್ ಮತ್ತು ವಕ್ಫ್ ತಿದ್ದುಪಡಿ ಕಾಯ್ದೆಯ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದೇಶದ ಹಿರಿಮೆ ಮತ್ತು ಘನತೆಯ ಸಂಕೇತವಾಗಿ ಜಗತ್ತಿನ ಮುಂದೆ ತಲೆಯೆತ್ತಿ ನಿಂತಿರುವ ತಾಜಮಹಲ್, ಕುತುಬ್ ಮಿನಾರ್, ಫತೇಪುರ್ ಸಿಕ್ರಿ, ಕೆಂಪುಕೋಟೆ, ಗೋಲಗುಂಬಸ್ ನಂತಹ ಸ್ಮಾರಕಗಳನ್ನು ದೇಶಕ್ಕೆ ಸಮರ್ಪಿಸಿದ ಮುಸ್ಲಿಂ ಸಮುದಾಯವನ್ನು ಫ್ಯಾಸಿಸ್ಟ್ ಶಕ್ತಿಗಳು ನಿರಂತರ ಅಪರಾಧಿ ಸ್ಥಾನದಲ್ಲಿ ನಿಲ್ಲಸುತ್ತಿದೆ. ಇದೀಗ ಮುಸ್ಲಿಂ ವಿರೋಧಿ ಕಾನೂನುಗಳನ್ನು ಶಾಸನ ಸಭೆಯ ಮೂಲಕ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಅಂತಹ ಒಂದು ಮಾರಕ ಕಾಯಿದೆ ಆಗಿರುತ್ತದೆ ವಕ್ಫ್ ತಿದ್ದುಪಡಿ ಕಾಯಿದೆ. ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಉದ್ದೇಶಗಳಿಗಾಗಿ ನಮ್ಮ ಪೂರ್ವಜರು ದೇವನ ಹೆಸರಿನಲ್ಲಿ ದಾನ ಮಾಡಿದ ಸೊತ್ತಿನ ಒಂದು ಹುಲ್ಲು ಕಡ್ಡಿಯನ್ನು ಮುಟ್ಟುವ ಅಧಿಕಾರ ಯಾರಿಗೂ ಇರುದಿಲ್ಲ. ಅಂತಹ ಸೊತ್ತಿನ ಮೇಲೆ ಅಧಿಕಾರ ಪ್ರಯೋಗಿಸಲು ಹೊರಟ ಬಿಜೆಪಿ ಸರಕಾರದ ನಿಲುವನ್ನು ಸಂವಿಧಾನ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಿದೆ ಎಂದರು.
ಎನ್.ಆರ್.ಸಿ, ಸಿ ಎ.ಎ.ಎ ಮತ್ತು ವಕ್ಫ್ ತಿದ್ದುಪಡಿ ಮೂಲಕ ಬಿಜೆಪಿ ಸರಕಾರ ದೇಶದ ಮುಸ್ಲಿಮರ ಅಸ್ತಿತ್ವ ಮತ್ತು ಅಸ್ಮಿತೆಗೆ ಕೊಡಲಿಯೇಟು ನೀಡಲು ಹೊರಟಿದೆ. ಇದನ್ನು ಯಾವ ಬೆಲೆ ತೆತ್ತಾದರೂ ತಡೆಯಬೇಕಿರುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಕ್ಷದ ಕುಕ್ಕಳ ಬ್ರಾಂಚ್ ಅಧ್ಯಕ್ಷರು ಶಮೀರ್ ಪುಂಜಾಲಕಟ್ಟೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ನವಾಝ್ ಕಟ್ಟೆ, ಜಿಲ್ಲಾ ಸಮಿತಿ ಸದಸ್ಯ ಹನೀಫ್ ಪುಂಜಾಲಕಟ್ಟೆ , ಬೆಳ್ತಂಗಡಿ ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ನಿಸಾರ್ ಕುದ್ರಡ್ಕ, ಬೆಳ್ತಂಗಡಿ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಕಾಣಿಯೂರು ಬ್ಲಾಕ್ ಅಧ್ಯಕ್ಷರಾದ ಮುಸ್ತಫಾ ಬಂಗೇರುಕಟ್ಟೆ, ಬದ್ರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಹಮೀದ್, ನೂರುಲ್ ಹುದಾ ಮಸೀದಿ ಮೂರ್ಜೆ ಅಧ್ಯಕ್ಷರಾದ ಮುನೀರ್ ಮೂರ್ಜೆ ಹಾಗೂ ಸ್ಥಳೀಯ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ರವೂಫ್ ಪುಂಜಾಲಕಟ್ಟೆ ಸ್ವಾಗತಿಸಿ ನಿರೂಪಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version