

ಬೆಳ್ತಂಗಡಿ: ಕರಾವಳಿ ಪ್ರದೇಶದ ಅಭಿವೃದ್ದಿಗೆ ಸೂಕ್ತ ಅನುದಾನ ಒದಗಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಸಲ್ಲಿಸಿದ್ದು ಈ ಬಾರಿಯ ಬಜೆಡ್ ನಲ್ಲಿ ಸೂಕ್ತ ಅನುದಾನ ಲಭಿಸುವ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿದರು.
ಅವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರಾವಳಿ ಅಭಿವೃದ್ಧಿ ಮಂಡಳಿಯ ಮೂಲಕ 500ಕೋಟಿ ಅನುದಾನದ ಬೇಡಿಕೆಯನ್ನು ಮುಂದಿಡಲಾಗಿದೆ. ಪ್ರವಾಸೋದ್ಯಮ, ಮೀನುಗಾರಿಕೆ, ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಸರಕಾರದ ಗಮನಸೆಳೆಯಲಾಗಿದೆ ಎಂದರು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ ಅದರ ಈಡೇರಿಕೆಗೆ ಪ್ರಯತ್ನಿಸಲಾಗುವುದು ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಯವರಲ್ಲಿ ಮನವಿ ಮಾಡಲಾಗಿದೆ ಎಂದ ಅವರು ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದ ರಚನೆಗೆ ಅನುದಾನ ಒದಗಿಸುವ ಬಗ್ಗೆ ಈಗಾಗಲೇ ಇಲಾಖೆಯ ಸಚಿವರ ಗಮನಕ್ಕೆ ತರಲಾಗಿದ್ದು ಈ ಬಾರಿ ಅನುದಾನ ಒದಗಿಸಲಾಗುವುದು ಎಂದರು.
ಡಿ.ಸಿ ಮನ್ನಾ ಜಮೀನು ಹಂಚಿಕೆಯ ಬಗ್ಗೆ ದ.ಕ ಜಿಲ್ಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ ಈ ಬಗ್ಗೆ ಈ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ಗ್ಯಾರಂಟಿ ಯೋಜನೆಯ ಮೂಲಕವಾಗಿ ಜಿಲ್ಲೆಗೆ ಸುಮಾರು ಎರಡು ಸಾವಿರ ಕೋಟಿಯಷ್ಟು ಅನುದಾನ ಬಂದಿದೆ. ಇದು ಸಾಮಾನ್ಯ ಜನರ ಕೈ ಸೇರಿದೆ ಇದರಲ್ಲಿ ಯಾವ ರಾಜಕೀಯವೂ ಇಲ್ಲ ಇದು ಅಭಿವೃದ್ಧಿಯಲ್ಲವೇ ಎಂದು ಪ್ರಶ್ನಿಸಿದ ಅವರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಇದರಿಂದ ಪ್ರಯೋಜನವಾಗಿದೆ ಎಂದರು. ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಸರಕಾರ ಅನುದಾನ ಒದಗಿಸಿದೆ. ಬಿಪಿಎಲ್. ಕಾರ್ಡಗಳ ರದ್ದತಿಯ ಬಗ್ಗೆ ವಿರೋಧ ಪಕ್ಷದವರು ಮಾತನಾಡುತ್ತಿದ್ದಾರೆ ಆದರೆ ಯಾವುದೇ ಅರ್ಹ ಕುಟುಂಬಗಳ ಪಡಿತರ ಚೀಟಿಗಳು ಎಲ್ಲಿಯು ರದ್ದಾಗಿಲ್ಲ ಎಂದ ಅವರು ಜಿಲ್ಲೆಯಲ್ಲಿ ಕೇವಲ 806ಪಡಿತರ ಚೀಟಿಗಳು ಮಾತ್ರ ರದ್ದಾಗಿದೆ. ಮುಂದಿನ ತಿಂಗಳಿನಿಂದ ತಲಾ 10ಕೆ.ಜಿ ಯಂತೆ ಅಕ್ಕಿ ವಿತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಟ, ಜಿಲ್ಲಾ ಕೆ.ಡಿ.ಪಿ ಸದಸ್ಯ ಸಂತೋಷ್ ಕುಮಾರ್
ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಜಿ.ಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ಶಾಹುಲ್ ಹಮೀದ್, ನಮೀತಾ ಪೂಜಾರಿ, ನ.ಪಂ ಸದಸ್ಯ ಜಗದೀಶ್ ಡಿ,
ಪಕ್ಷದ ಮುಖಂಡರುಗಳಾದ ಪ್ರವೀಣ್ ಫೆರ್ನಾಂಡಿಸ್, ಪಿ.ಟಿ ಸೆಭಾಸ್ಟೀನ್ ಕಳೆಂಜ, ಹಕೀಂ ಕೊಕ್ಕಡ ಉಪಸ್ಥಿತರಿದ್ದರು.








