Home ಶಾಲಾ ಕಾಲೇಜು ಎಸ್.ಡಿ.ಎಂ.ಕಾಲೇಜಿನಲ್ಲಿ ರಕ್ತದಾನ ಶಿಬಿರ

ಎಸ್.ಡಿ.ಎಂ.ಕಾಲೇಜಿನಲ್ಲಿ ರಕ್ತದಾನ ಶಿಬಿರ

25
0

ಉಜಿರೆ : ಉಜಿರೆಯ ಶ್ರೀ ಧ. ಮಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್, ಮಂಗಳೂರು , ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ , ರೋಟರಿ ಕ್ಲಬ್, ಬೆಳ್ತಂಗಡಿ , ಲಯನ್ಸ್ ಕ್ಲಬ್, ಬೆಳ್ತಂಗಡಿಯ ಸಹಯೋಗದೊಂದಿಗೆ ಕಾಲೇಜಿನಲ್ಲಿ ರಕ್ತ ದಾನ ಶಿಬಿರವನ್ನು ಜನವರಿ 27 ರಂದು ಆಯೋಜಿಸಲಾಯಿತು.

ಕಾರ್ಯಕ್ರಮದ‌ ಉದ್ಘಾಟನೆ‌ ನೆರವೇರಿಸಿದ ಲಯನ್ಸ್ ಕ್ಲಬ್, ಬೆಳ್ತಂಗಡಿಯ ಅಧ್ಯಕ್ಷರಾದ ಲಯನ್. ದೇವದಾಸ್ ಶೆಟ್ಟಿ ಹಿಬರೋಡಿ ಮಾತನಾಡಿ ” ನಮ್ಮಲ್ಲಿ ಹಲವರು ದಾನಗಳಿದ್ದರೂ , ರಕ್ತದಾನ ಅದರಲ್ಲಿ ಶ್ರೇಷ್ಠ ದಾನವಾಗಿದೆ. ಒಬ್ಬರ ಜೀವವನ್ನು ಉಳಿಸಲು ರಕ್ತದಾನ ಬಹಳ ಮಹತ್ವದ್ದಾಗಿದೆ. ರಕ್ತದಾನದ ಮಹತ್ವವನ್ನು ಇನ್ನೊಬ್ಬರಿಗೆ ತಿಳಿಸಲು ಇಂತಹ ಕಾರ್ಯಕ್ರಮ ಅಗತ್ಯವಾಗಿದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಮಾತನಾಡಿ ” ರಕ್ತದಾನ ಎನ್ನುವುದು ಸಾವು ಬದುಕಿನ ನಡುವೆ ಹೋರಾಟ ಮಾಡುವ ಅದೆಷ್ಟೋ ಜನರಿಗೆ ಜೀವ ನೀಡುವ ಪುಣ್ಯದ ಕೆಲಸ. ರಕ್ತದಾನವು ದೇಹಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ಸಂಶೋಧನೆಗಳ ಪ್ರಕಾರ ನಿರಂತರವಾಗಿ ರಕ್ತದಾನ ಮಾಡುವವರ ಆರೋಗ್ಯ ಇತರರಿಗೆ ಹೋಲಿಕೆ ಮಾಡಿದರೆ ಇನ್ನಷ್ಟು ಉತ್ತಮವಾಗಿರುತ್ತದೆ. ಹಾಗಾಗಿ ಇಂತಹ ಪುಣ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆಯ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಜನಾರ್ಧನ್ ಮಾತನಾಡಿ ” ರಕ್ತದಾನ ಎನ್ನುವುದು ಸ್ವಯಂಪ್ರೇರಿತ ದಾನ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ಯಾವಾಗ ಅನಿವಾರ್ಯ ಆಗುತ್ತದೆಯೋ ಆಗ ರಕ್ತದ ಮಹತ್ವ ತಿಳಿಯುತ್ತದೆ ” ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಂಗಳೂರಿನ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ನ ಕ್ಯಾಂಪ್ ಸಂಯೋಜಕರಾದ ಪ್ರವೀಣ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆಯ ಪಥೋಲಜಿಸ್ಟ್ ಡಾ. ವಿನೀತಾ ರಕ್ತದಾನ ಮಾಡಲು ಇರಬೇಕಾದ ಅರ್ಹತೆಗಳು ಮತ್ತು ರಕ್ತದಾನದ ಮಹತ್ವವನ್ನು ತಿಳಿಸಿದರು.


ವೇದಿಕೆಯಲ್ಲಿ ರೋಟರಿ ಕ್ಲಬ್, ಬೆಳ್ತಂಗಡಿಯ ಕಾರ್ಯದರ್ಶಿ ಸಂದೇಶ್ ರಾವ್ , ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಯೋಗಾಲಯ ಮುಖ್ಯಸ್ಥ ಶಿತಿಕಂಠ ಭಟ್ , ಯೋಜನಾಧಿಕಾರಿ ಪ್ರೊ.ದೀಪಾ ಆರ್. ಪಿ. ಉಪಸ್ಥಿತರಿದ್ದರು.

ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಸ್ವಾಗತಿಸಿ , ಸ್ವಯಂಸೇವಕಿಯರಾದ ಮಾನ್ಯ ಮತ್ತು ವರ್ಷ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here