ಬೆಳ್ತಂಗಡಿ; ಕಳೆದ 2 ವರ್ಷಗಳ ಹಿಂದೆ ಆದಿವಾಸಿಗಳಿಗಿದ್ದ ಏಕೈಕ ಸಂಪರ್ಕ ರಸ್ತೆಯ ಮದ್ಯದ ಸೇತುವೆ ಮುರಿದು ಬಿದ್ದರೂ ಹೊಸ ಸೇತುವೆ ನಿರ್ಮಿಸದೆ ಇರುವ ಸರಕಾರದ ನಿರ್ಲಕ್ಷ ಅತ್ಯಂತ ಖಂಡನೀಯವಾಗಿದೆ, ಅದನ್ನು ತಕ್ಷಣ ಪುನರ್ನಿರ್ಮಿಸಿಕೊಡಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದರು
ಅವರು ನಾರಾವಿ ಗ್ರಾಮ ಪಂಚಾಯತು ಎದುರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಅರಣ್ಯವನ್ನೂ ರಕ್ಷಿಸುತ್ತಾ, ಪರಿಸರ ಸಂರಕ್ಷಿಸುತ್ತಾ ತಮ್ಮ ಕಾಡಲ್ಲೆ ತಮ್ಮ ಬದುಕು ಕಟ್ಟಿಕೊಂಡ ಆದಿವಾಸಿಗಳು ಇಂದು ಅರಣ್ಯದಲ್ಲಿ ವಾಸಿಸುವುದೇ ಸರಕಾರಕ್ಕೆ ಬೇಡವಾಗಿದೆ. ಅದಾನಿ ಮೊದಲಾದ ಕಾರ್ಪರೇಟ್ ಕಂಪೆನಿಗಳಿಗೆ ಒರಿಸ್ಸಾದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿ ಅರಣ್ಯ ನಾಶ ಮಾಡುತ್ತಿರುವ ಸರಕಾರಗಳು ಇಂದು ಇಲ್ಲಿ ನಕ್ಸಲ್ ಹೆಸರಲ್ಲಿ ಬೆದರಿಸಿ ಆದಿವಾಸಿಗಳು ಅರಣ್ಯ ಬಿಟ್ಟು ಹೋಗುವಂತೆ ಮಾಡುತ್ತಿರುವುದು ವಿ಼ಷಾಧನೀಯ. ಆದಿವಾಸಿಗಳ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡದೆ ಅರಣ್ಯವಾಸಿಳೇ ಅರಣ್ಯ ಬಿಟ್ಟು ಹೊರಬರುವಂತೆ ಒತ್ತಡ ಹಾಕಲಾಗುತ್ತಿದೆ ಎಂದರು.
ಈ ಸಂದರ್ಭ ಮಾತಾಡಿದ ಸಿಪಿಐಎಂ ಮುಖಂಡ ಬಿ.ಎಂ.ಭಟ್ ಅವರು, ಸರಕಾರ ನಕ್ಸಲ್ ಭೂತವನ್ನು ತೋರಿಸಿ ಹೆದರಿಸಿ ಎನ್ಕೌಂಟರ್ ಹೆಸರಲ್ಲಿ ಆದಿವಾಸಿಗಳ ದ್ವಂಸ ಮಾಡುತ್ತಾ ಅರಣ್ಯ ಭೂಮಿಯನ್ನು ಕಾರ್ಪರೇಟುಗಳಿಗಾಗಿ ಸ್ವಾಧೀನ ಪಡಿಸಲು ಮುಂದಾಗುತ್ತಿದೆ ಎಂದು ಟೀಕಿಸಿದರು. ಆನೆಯನ್ನು ಕೊಲ್ಲಲು ಅನುಮತಿ ನೀಡಿ ಎಂದು ವಿಧಾನ ಸೌಧದಲ್ಲಿ ಮಾತಾಡುವ ಶಾಸಕರಿಗೆ ಆದಿವಾಸಿಗಳ ಬದುಕು ರಕ್ಷಣೆಯ ಬಗ್ಗೆ ಮಾತಾಡಬೇಕೆಂದು ಅನಿಸಿಲ್ಲ ಯಾಕೆ ಎಂದರು.
ಪ್ರಾಸ್ತಾವಿಕವಾಗಿ ಆದಿವಾಸಿಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಅಧ್ಯಕ್ಷರಾದ ಸುಕುಮಾರ್ ದಿಡುಪೆ ಮಾತಾಡಿದರು. ಹೋರಾಟದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಮುಖಂಡರಾದ ಡಾ. ಕೃಷ್ಣಪ್ಪ ಕೊಂಚಾಡಿ, ರಾಜ್ಯ ಸಮಿತಿ ಸದಸ್ಯರಾದ ಕೃಷ್ಣ ಇನ್ನಾ, ಸಂಘಟನೆಯ ಗೌರವಾಧ್ಯಕ್ಷರಾದ ಚನಿಯಪ್ಪ ಎಂ.ಕೆ. ಧರ್ಮಸ್ಥಳ, ಚೀಂಕ್ರ ಎಂ.ಕೆ., ಸುರೇಶ್ ಎಂಕೆ., ಶಶಿಧರ ಎಂ.ಕೆ, ರವಿ ಎಂ.ಕೆ., ದಿನೇಶ್ ನಾಯ್ಕ, ಕಾರ್ಮಿಕ ಮುಖಂಡರುಗಳಾದ ಲೋಕೇಶ್ ಕುದ್ಯಾಡಿ, ಜಯಶ್ರಿ, ರಾಮಚಂದ್ರ, ಸುಜಾತ, ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್, ಅಶ್ವಿತ ಮೊದಲಾದವರಿದ್ದರು. ಮೊದಲಿಗೆ ಮುಖಂಡರಾದ ಸುಧಾಕರ ಎಂ.ಕೆ ಸ್ವಾಗತಿಸಿದರು. ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಕಾರ್ಯದರ್ಶಿ ಪೂವಪ್ಪ ಎಂ.ಕೆ ವಂದಿಸಿದರು. ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ ಮೊದಲಾದವರು ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿದರು. ಸೇತುವೆ ನಿರ್ಮಾಣಕ್ಕೆ ಆದ್ಯ ಗಮನ ನೀಡುವ ಭರವಸೆ ನೀಡಿದರು.