ಬೆಳ್ತಂಗಡಿ; ಬಡ ದಲಿತ ವೃದ್ದೆ ರಾಧಮ್ಮ ಅವರ ಮನೆ ದ್ವಂಸ ಮಾಡಿದ ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ, ಮತ್ತು ರಾಧಮ್ಮನ ಗಂಡ ಮುತ್ತು ಸ್ವಾಮಿ ಮೇಲೆ ಹಲ್ಲೆ ನಡೆಸಿದ ಕೌಕ್ರಾಡಿ ಗ್ರಾಮ ಆಡಳಿತಾದಿಕಾರಿ ಸಿದ್ದುಲಿಂಗು ಜಂಗಮ ಶೆಟ್ಟಿ ಅವರ ಮೇಲೆ ಕಾನೂನು ಬದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರುಗಳನ್ನು ಅಮಾನತ್ತು ಮಾಡಿ ಬಂಧಿಸಲು ದಲಿತ ಹಕ್ಕು ಸಮಿತಿ ಒತ್ತಾಯಿಸುತ್ತದೆ ಎಂದು ದಲಿತ ಹಕ್ಕು ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಈಶ್ವರಿ ಶಂಕರ್ ಹೇಳಿದರು.
ಅವರು ಸೋಮವಾರ ಡಿ.ಎಚ್.ಎಸ್. ಮತ್ತು ಡಿ.ವೈ.ಎಫ್.ಐ. ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ, ಗೃಹ ಸಚಿವರಿಗೆ, ಮಾನಹಕ್ಕು ಆಯೋಗಕ್ಕೆ, ಎಸ್.ಸಿ.ಎಸ್.ಟಿ ಸೆಲ್ ಗೆ ಕಡಬ ತಹಶೀಲ್ದಾರ್ ಮತ್ತು ಕೌಕ್ರಾಡಿ ವಿ.ಎ. ಬಂದನಕ್ಕೆ ಆಗ್ರಹಿಸಿ ಮನವಿ ನೀಡಿ ಮಾತಾಡುತ್ತಿದ್ದರು. ರಾಧಮ್ಮನ ಮನೆ ಎಂಬುದಕ್ಕೆ ಎಲ್ಲಾ ರೀತಿಯ ದಾಖಲೆಗಳಿದ್ದು, ಸದ್ರಿ ಮನೆಯ ದ್ವಂಸದ ಬಗ್ಗೆಯಾಗಲಿ, ತೆರವುಗೊಳಿಸುವ ಬಗ್ಗೆಯಾಗಲಿ ಯಾವುದೇ ಆದೇಶ ಇಲ್ಲದಿದ್ದರೂ, ಕಾನೂನು ಬಾಹಿರವಾಗಿ ದುರುದ್ದೆಶದಿಂದ ರಾಧಮ್ಮರ ಮನೆ ದ್ವಂಸ ಮಾಡಿ ಅಕ್ರಮ ಎಸಗಿದವರ ಮೇಲೆ ದೂರು ದಾಖಲಿಸಿದ್ದರೂ ಪ್ರಕರಣ ದಾಖಲಿಸದಿರುವ ಉಪ್ಪಿನಂಗಡಿ ಪೋಲೀಸ್ ಇಲಾಖೆಯ ನಡೆಯನ್ನು ಖಂಡಿಸಿ, 70 ವರ್ಷದ ಮುದುಕನಿಗೆ ಯುವಕ ಗ್ರಾಮ ಆಡಳಿತಾಧಿಕಾರಿಯೇ ಹೊಡೆದು ಹಲ್ಲೆ ನಡೆಸಿ, ಆ ಮುದುಕ ಹೊಡೆದನೆಂದು ಸುಳ್ಳು ದೂರು ದಾಖಲಿಸಿ ದೌರ್ಜನ್ಯ ಎಸಗಿರುವ ಕೌಕ್ರಾಡಿ ಗ್ರಾಮಕರಣಿಕನ ಮೇಲೆ ಪ್ರಕರಣ ದಾಖಲಿಸದ ಪೋಲೀಸ್ ಇಲಾಖೆ ಆರೋಪಿಗಳ ರಕ್ಷಣೆಗೆ ನಿಂತು ಕಾನೂನಿಗೆ ದ್ರೋಹ ಎಸಗುತ್ತಿದೆ ಎಂದರು. ರೇಣುಕನ ಹೆಸರಲ್ಲಿ ಹೈಕೋರ್ಟಲ್ಲಿ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರಿನ ಅಶೋಕ ಆಚಾರಿ ಎಂಬವರು ಕೇಸ್ ದಾಖಲಿಸಿದ ಬಗ್ಗೆ ಸರಕಾರಿ ವಕೀಲರು ವಸ್ತುಸ್ಥಿತಿ ವರದಿ ಕೇಳಿ ನೀಡಿದ ನೋಟೀಸನ್ನೇ ಹೈಕೋರ್ಟು ಆದೇಶ ಎಂದು ಹೇಳುತ್ತಾ ರೇಣುಕೆಯ ಮನೆ ದ್ವಂಸ ಮಾಡುವ ಬದಲು ರಾಧಮ್ಮನ ಮನೆ ದ್ವಂಸ ಮಾಡಿ ಕ್ರಿಮಿನಲ್ ಅಪರಾಧವೆಸಗಿದ್ದಾರೆ.
ರಾಧಮ್ಮನ ಮನೆ ಎಂಬುದಕ್ಕೆ ನಾವು ದಾಖಲೆ ನೀಡಿದರೂ, ರೇಣುಕನ ಮನೆ ಎಂಬುದಕ್ಕೆ ದಾಖಲೆಯನ್ನೇ ನೀಡದೆ ಬಡ ದಲಿತ ವೃದ್ದರ ಮೇಲೆ ದೌರ್ಜನ್ಯ ಎಸಗಿರುವುದನ್ನು ದಲಿತ ಹಕ್ಕು ಸಹಿಸುವುದಿಲ್ಲ ಎಂದರು. ಅದಕ್ಕಾಗಿ 13.12.2024 ರಂದು ಪುತ್ತೂರು ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಿದ್ದೇವೆ ಎಂದವರು ಹೇಳಿದರು.
ಈ ಸಂದರ್ಭ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರಾದ ಸುಕುಮಾರ್ ದಿಡುಪೆ, ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್, ತಾಲೂಕು ಖಜಾಂಜಿಯಾದ ಜಯಂತ ಪಾದೆಜಾಲು, ಮುಖಂಡರುಗಳಾದ ಲೋಕೇಶ್ ಪಟ್ರಮೆ, ಅಶ್ವಿತ, ಪುಷ್ಪಾ, ಕುಮಾರಿ ಜಯರಾಮ ಮಯ್ಯ ವೃದ್ದೆ ರಾಧಮ್ಮ ಮೊದಲಾದವರಿದ್ದರು.