Home ರಾಜಕೀಯ ಸಮಾಚಾರ ಆದಿವಾಸಿಗಳ ವಸತಿ ಪ್ರದೇಶಗಳಿಗೆ ಮೂಲಭೂತ ಸಲಭ್ಯಗಳ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯ ತೀರ್ಮಾನಗಳ...

ಆದಿವಾಸಿಗಳ ವಸತಿ ಪ್ರದೇಶಗಳಿಗೆ ಮೂಲಭೂತ ಸಲಭ್ಯಗಳ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಭೆಯ ತೀರ್ಮಾನಗಳ ಅನುಷ್ಠಾನಕ್ಕೆ ಜಯಾನಂದ ಪಿಲಿಕಳ ಒತ್ತಾಯ.

0

ಬೆಳ್ತಂಗಡಿ; ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಅರಣ್ಯವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಮಹತ್ವದ ತೀರ್ಮಾನಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದು ಬೆಳ್ತಂಗಡಿ ತಾಲೂಕು ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ ತಿಳಿಸಿದ್ದಾರೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅಳಿವಿನಂಚಿನಲ್ಲಿರುವ ಆದಿವಾಸಿ ಸಮುದಾಯಗಳ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಭೆಯಲ್ಲಿ ದ.ಕ ಜಿಲ್ಲೆಯ ಆದಿವಾಸಿಗಳ ಪ್ರತಿನಿಧಿಯಾಗಿ ಜಯಾನಂದ ಪಿಲಿಕಳ ಅವರು ಭಾಗಿಯಾಗಿ ಜಿಲ್ಲೆಯ ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವ ಕಾರ್ಯವನ್ನು ಮಾಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಹಾಗೂ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಮುಂದಿನ ಸಭೆಯಲ್ಲಿ ಈ ಬಗ್ಗೆ ಅಗತ್ಯ ಮಾಹಿತಿಗಳನ್ನು ಒದಗಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿಯೂ ಜಯಾನಂದ ಅವರು ತಿಳಿಸಿದ್ದಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅರಣ್ಯವಾಸಿಗಳ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಮರೀಚಿಕೆಯಾಗಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮುತುವರ್ಜಿ ವಹಿಸಿರುವುದರಿಂದ ಆದಿವಾಸಿ ಸಮುದಾಯಕ್ಕೆ ಅನುಕೂಲವಾಗಲಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯಗಳನ್ನು ಜಿಲ್ಲಾಡಳಿತ ತಕ್ಷಣವೇ ಜಾರಿಗೊಳಿಸಬೇಕು. ಆದಿವಾಸಿ ಮಲೆಕುಡಿಯ ಸಮುದಾಯಕ್ಕೆ ಸೌಲಭ್ಯ ಒದಗಿಸಿ ಸಾಮಾಜಿಕ ಸಮಾನತೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.

ಅರಣ್ಯವಾಸಿಗಳು ವಾಸಿಸುವ ಪ್ರದೇಶಕ್ಕೆ ಸಮರ್ಪಕ ರಸ್ತೆ ಸಂಪರ್ಕ, ಇನ್ನೂ ಬೆಳಕು ಕಾಣದ ಮನೆಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದ.ಕ ಜಿಲ್ಲೆಗೆ ಸಂಬಂಧಿಸಿ ಈ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತವಾಗಿ ಸೌಕರ್ಯ ಒದಗಿಸಬೇಕು.

ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಅರಣ್ಯವಾಸಿಗಳು ವಾಸಿಸುವ ಪ್ರದೇಶಗಳಿಗೆ ಜಿಲ್ಲಾಡಳಿತ ಭೇಟಿ ನೀಡಿ ಕಾರ್ಯಯೋಜನೆ ರೂಪಿಸಬೇಕು. ಆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಅರಣ್ಯವಾಸಿಗಳಿಗೂ ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version