ಬೆಳ್ತಂಗಡಿ: ಸಂಸಾರ ವೆಂಬ ರಥದಲ್ಲಿ ಪುರುಷ ಮಹಿಳೆ ಎರಡು ಚಕ್ರಗಳಿದ್ದಂತೆ. ಇಬ್ಬರೂ ಸರಿಸಮಾನವಾಗಿ ಹೆಜ್ಜೆ ಹಾಕಿದರೆ ಸಂಸಾರದ ಹಾದಿ ಸುಗಮವಾಗಿ ಸಾಗುವುದು. ಅಂತೆಯೇ ದೇಶ, ಸಮಾಜದ ಅಭಿವೃದ್ಧಿಯ ದೃಷ್ಟಿಯಲ್ಲಿ ಜತೆಯಾಗಿ ಸಾಗಬೇಕು ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು. ಅವರು ನ 23 ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಬೆಳ್ತಂಗಡಿ ಲಾಯಿಲದ ವಿಮುಕ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗೃಹ ನಿರ್ವಹಣೆಯಲ್ಲಿ
ಮಹಿಳೆಯರಿಗಿರುವಷ್ಟು ಶಕ್ತಿ ಪುರುಷರಿಗಿಲ್ಲ. ಮಹಿಳೆಯರು ಸಮಾಜದ ಬದಲಾವಣೆಗೆ ಶಕ್ತಿ ನೀಡಿದೆ. ಸರಕಾರದ ಮಹಿಳಾ ಕೇಂದ್ರಿತ ಯೋಜನೆಗಳು ಹೆಚ್ಚು ಕಾರ್ಯಗತ ಗೊಳ್ಳಿಸುತ್ತಿದ್ದು ಮಹಿಳೆಯರು ಶಕ್ತಿಯಾಗಿದ್ದಾರೆ. ಮಹಿಳೆಯರು ತಮ್ಮ ಹಕ್ಕು, ಕರ್ತವ್ಯಗಳ ಬಗೆಗೂ ಜಾಗೃತರಾಗಿದ್ದಾರೆ. ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ವಿಮುಕ್ತಿ ಸಂಸ್ಥೆ ನಡೆಸುತ್ತಿರುವ ಕಾರ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ ವಿಮುಕ್ತಿ ಸ್ವಸಹಾಯ ಸಂಘಗಳಿಂದ ತಾಲೂಕಿನ ನೂರಾರು ಮಹಿಳೆಯರು ಹೆಚ್ಚು ಸ್ವಾವಲಂಬಿಗಳಾಗಿ, ಆರ್ಥಿಕವಾಗಿ ಸಶಕ್ತರಾ ಗಿದ್ದಾರೆ. ಸ್ವಂತ ದುಡಿಮೆಯಿಂದ ಕುಟುಂಬದ ನಿರ್ವಹಣೆಯನ್ನು ಸುಲಲಿತವಾಗಿ ನಡೆಸುತ್ತಿದ್ದಾರೆ ಎಂದರು.
ಕಪುಚಿನ್ ಕೃಷಿಕ ಸೇವಾ ಕೇಂದ್ರದ ಅಧ್ಯಕ್ಷ ವಂ . ಫಾ. ಆಲ್ವಿನ್ ಡಾಯಸ್ ವಿಮುಕ್ತಿ ಸ್ವಸಹಾಯ ಸಂಘಗಳ 25 ವರ್ಷಗಳ ನಡೆದು ಬಂಡ ಹಾದಿಯನ್ನು ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಮುಕ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಅಧ್ಯಕ್ಷೆ ಶಾಲಿ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ, ಮೂಡಬಿದ್ರಿಯ ನ್ಯಾಯವಾದಿ ಅಶ್ವಿನಿ ಡಿಸೋಜಾ ಮಾತನಾಡಿ ಮಹಿಳೆಯರು ಶಿಕ್ಷಣ,ಜ್ಞಾನ ಪಡೆಯಲು ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಅನಿಷ್ಟ ಪದ್ಧತಿಗಳನ್ನು ತೊಲಗಿಸಿ,ನಾರೀ ಶಕ್ತಿಯಿಂದ ಒಳ್ಳೆಯ ಅಭಿವೃದ್ಧಿ ಕಾರ್ಯಗಳಿಂದ ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದರು. ಕಪುಚಿನ್ ಕೃಷಿಕ ಸೇವಾ ಕೇಂದ್ರ ವಿಮುಕ್ತಿಯ ನಿರ್ದೇಶಕ ವಂ .ಫಾ ವಿನೋದ್ ಮಸ್ಕರೇನ್ಹಸ್ ಪ್ರಸ್ತಾವಿಸಿದರು. ಬೆಸ್ಟ್ ಫೌಂಡೇಶನ್ ಮುಖ್ಯಸ್ಥ ರಕ್ಷಿತ್ ಶಿವರಾಂ ಉಪಸ್ಥಿತರಿದ್ದು ಶುಭ ಕೋರಿದರು.

ಕಾರ್ಯದರ್ಶಿ ರೈನಾ ಲೋಬೊ ಸಂಘದ 25 ವರ್ಷಗಳ ಸಾಧನೆಯ ವರದಿ ಮಂಡಿಸಿದರು. ಸ್ವಸಹಾಯ ಸಂಘದ ಸದಸ್ಯರು ಸಂಗ್ರಹಿಸಿದ ರೂ 8.5೦ ಲಕ್ಷ ಮೊತ್ತದ ನೂತನ ಆರೋಗ್ಯ ನಿಧಿಯನ್ನು ಅಧ್ಯಕ್ಷೆ ಶಾಲಿ ಉದ್ಘಾಟಿಸಿ ಅದನ್ನು ಸ್ವಸಹಾಯ ಸಂಘದ ಅನಾರೋಗ್ಯ ಪೀಡಿತ ಸದಸ್ಯರು ಹಾಗು ಆರ್ಥಿಕವಾಗಿ ಅಗತ್ಯವುಳ್ಳರಿಗೆ ನೆರವಾಗುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ ಎಂದರು . ಇದೇ ಸಂದರ್ಭದಲ್ಲಿ ವಿಮುಕ್ತಿ ಸ್ವಸಹಾಯ ಒಕ್ಕೂಟದ ಹಿಂದಿನ 1೦ ಮಂದಿ ಅಧ್ಯಕ್ಷರು ಹಾಗು 1೦ ಮಂದಿ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಅರುಣಾ ಲೋಬೊ, ಸಿ ಡಿ ಪಿ ಓ ಪ್ರಿಯ ಆಗ್ನೆಸ್,ಇಂದಿರಾ ,ಚೈತ್ರ, ಸಂಘದ ಉಪಾಧ್ಯಕ್ಷೆ ಶಶಿಕಲಾ,ಜತೆ ಕಾರ್ಯದರ್ಶಿ ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು. ಮೆರೀನ್ ಸ್ವಾಗತಿಸಿದರು.