ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕೃಷಿ ಭೂಮಿಗೆ ದಾಳಿ ನಡೆಸಿದ್ದು ಕೃಷಿ ಹಾನಿ ಉಂಟುಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮಿತ್ತಬಾಗಿಲು ಗ್ರಾಮದ ಬಾನೊಟ್ಟು ಯೋಗೀಶ್ ಎಂಬವರ ಸೋಲಾರ್ ಬೇಲಿಯನ್ನು ಮುರಿದು ಹಾಕಿರುವ ಕಾಡಾನೆಗಳು ಕೋಡಿ ಶೀನಪ್ಪ ಗೌಡ ಎಂಬವರ ಬಾಳೆ ಗಿಡ ಮತ್ತು ಗದ್ದೆಗಳಿಗೆ ದಾಳಿ ನಡೆಸಿ ಹಾನಿ ಉಂಟು ಮಾಡಿವೆ. ಹಿಂಡಿನಲ್ಲಿ ಎರಡಕ್ಕಿಂತ ಅಧಿಕ ಕಾಡಾನೆಗಳಿರುವ ಶಂಕೆ ವ್ಯಕ್ತವಾಗಿದೆ.
ಸೋಮವಾರ ರಾತ್ರಿ ಸಮೀಪದ ಮಲವಂತಿಗೆ ಗ್ರಾಮದಲ್ಲಿ 6ಕ್ಕಿಂತ ಅಧಿಕ ಕಾಡಾನೆಗಳು ತೋಟಗಳಿಗೆ ನುಗ್ಗಿ ಹಾನಿ ಉಂಟುಮಾಡಿದ್ದವು.
ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.