Home ಸ್ಥಳೀಯ ಸಮಾಚಾರ ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳ‌ ಭಾಗವಹಿಸುವಿಕೆಯಲ್ಲಿ ನೇಜಿ ನಾಟಿ ಕಾರ್ಯ

ಬದುಕು ಕಟ್ಟೋಣ ಬನ್ನಿ ತಂಡದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳ‌ ಭಾಗವಹಿಸುವಿಕೆಯಲ್ಲಿ ನೇಜಿ ನಾಟಿ ಕಾರ್ಯ

0

ಬೆಳ್ತಂಗಡಿ : ‘ಕೃಷಿ ನಮ್ಮ ಸಂಸ್ಕೃತಿ. ಪ್ರಕೃತಿ ಮತ್ತು ಕೃಷಿಗೆ ಅವಿನಾಭಾವ ಸಂಬಂಧವಿದೆ. ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅನ್ನದಾನದ ಶ್ರೇಷ್ಠ ಕಾರ್ಯವಾಗಿದೆ. ಇಂತಹ ಬದುಕು ಕಟ್ಟುವ ಬದುಕು ಕಾಪಾಡುವ ನೇಜಿ ನೆಡುವ ಕೆಲಸದಲ್ಲಿ ವಿದ್ಯಾರ್ಥಿಗಳ ಕೈ ಜೋಡನೆ ಶ್ಲಾಘನೀಯ ಕಾರ್ಯ’ ಎಂದು ಸೋನಿಯಾ ಯಶೋವರ್ಮ ಹೇಳಿದರು.

ಅವರು ಭಾನುವಾರ ಬೆಳಾಲು ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದ ಬಳಿಯ ಗದ್ದೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ( ಸ್ವಾಯತ್ತ) ಉಜಿರೆ ಇದರ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ( ರಿ) ಉಜಿರ, ಇದರ ನೇತೃತ್ವದಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಉಜರೆ ಎಸ್.ಡಿ.ಎಂ. ಕಾಲೇಜಿನ ಸ್ಪೋಟ್ಸ್ ಕ್ಲಬ್, ಬೆಳ್ತಂಗಡಿ ರೋಟರಿ ಕ್ಲಬ್, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘ (ರಿ.) ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಇದರ ವ್ಯವಸ್ಥಾಪನಾ ಸಮಿತಿ, ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ ಬೆಳಾಲು ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಮಾರು 500 ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ‘ಯುವ ಸಿರಿ – ರೈತ ಭಾರತದ ಐಸಿರಿ’ ನೇಜಿ ನಾಟಿ ಕಾರ್ಯಕ್ರಮದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಗದ್ದೆಗೆ ಹಾಲೆರೆದು ನೇಜಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಯುವ ಜನತೆಯಲ್ಲಿ ಅಪಾರ ಶಕ್ತಿಯಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕಾಗ ಸಮೃದ್ಧವಾದ ಸಂಸ್ಕಾರಭರಿತ ಸಮಾಜ ನಿರ್ಮಾಣವಾಗುತ್ತದೆ. ಬಿತ್ತನೆಯ ಭತ್ತವನ್ನು ಮೊಳಕೆಗಾಗಿ ನೀರಿನಲ್ಲಿ ನೆನೆಸುವ ಸಂದರ್ಭ ಅದರ ಜೊಲ್ಲು ಬೇರ್ಪಡಿಸುವಂತೆ ಬದುಕಿನಲ್ಲಿ ಕೆಟ್ಟದ್ದನ್ನು ದೂರ ಮಾಡಿ ಒಳ್ಳೆಯ ವಿಚಾರಗಳನ್ನು ಬಿತ್ತುವ ಕಾರ್ಯವಾಗಬೇಕು’ ಎಂದರು.

ಶಾಸಕ ಹರೀಶ್ ಪೂಂಜ ನೇಜಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ‘ಶಿಸ್ತು ಮತ್ತು ಬದ್ಧತೆಗೆ ಇನ್ನೊಂದು ರೂಪವೇ ಬದುಕು ಕಟ್ಟೋಣ ತಂಡವಾಗಿದೆ. ಈ ತಂಡದಿಂದ ರಾಜ್ಯಕ್ಕೆ ಮಾದರಿಯಾದ ಕೆಲಸವಾಗುತ್ತಿದೆ. ಯುವ ಪೀಳಿಗೆ ಹಾಗೂ ಹಿರಿಯರನ್ನು ಒಟ್ಟು ಸೇರಿಸಿಕೊಂಡು ತುಳುನಾಡಿನ ಸತ್ವವನ್ನು ಸಾರುವ ಕೆಲಸವಾಗುತ್ತಿದೆ’ ಎಂದರು.

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಪ್ರಸ್ತಾವಿಸಿಕವಾಗಿ ಮಾತನಾಡಿ, ಈ ಕಾರ್ಯಕ್ರಮದ ಹಿಂದೆ ಒಂದು ತಿಂಗಳ ಶ್ರಮ ಇದೆ. ನೇಜಿ ನೆಡುವ ಕೆಲಸ ಮಾತ್ರವಲ್ಲ ಅದನ್ನು ಮುಂದಕ್ಕೆ ಚೆನ್ನಾಗಿ ಬೆಳೆಸಿ ಕಟಾವು ಮಾಡಿ ಭತ್ತ ಮತ್ತು ಬೈ ಹುಲ್ಲನ್ನು ಬೇರ್ಪಡಿಸುವವರೆಗಿನ ಕೆಲಸವೂ ನಮ್ಮಿಂದ ನಡೆಯುತ್ತದೆ.. ಇದು ಎಲ್ಲರಿಗೂ ಪ್ರೇರಣೆಯಾಗಬೇಕು. ಎಲ್ಲರ ಸಹಕಾರದಿಂದ ಮಾತ್ರ ಇದು ಸಾಧ್ಯವಾಗಿದೆ. ಈ ಕೆಲಸದಿಂದ ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ನಮ್ಮಲ್ಲೂ ಇಂತಹ ಕಾರ್ಯ ಮಾಡಬೇಕು ಎಂಬ ಕರೆಗಳ ಸಾಲು ಬರುತ್ತಿದೆ’ ಎಂದರು.

ವೇದಿಕೆಯಲ್ಲಿ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ರಾದ ಮೋಹನ್ ಕುಮಾರ್, ರಾಜೇಶ್ ಪೈ, ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಎಸ್.ಡಿ.ಎಂ,.ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿಭಾಗ ಮುಖ್ಯಸ್ಥ ರವೀಶ್ ಪಡುಮಲೆ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಅನಂತೋಡಿ ಅನಂತ ಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಗೌಡ, ಕಾರ್ಯದರ್ಶಿ ದುರ್ಗಾ ಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, , ಧರ್ಮಸ್ಥಳ ಕೃಷಿ ವಿಭಾಗದ ಬಾಲಕೃಷ್ಣ ಪೂಜಾರಿ, ಎಸ್.ಡಿ.ಎಂ.ಕಾಲೇಜಿನ ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಮಹೇಶ್ ಶೆಟ್ಟಿ, ದೀಪಾ ಆರ್ ರಾವ್, ಎಸ್.ಡಿ.ಎಂ. ಸ್ಪೋರ್ಟ್ ಕ್ಲಬ್ ನ ಮುಖ್ಯಸ್ಥ ರಮೇಶ್ ಮುಂತಾದವರು ಇದ್ದರು.

ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು, ಊರವರು ಸೇರಿ ಸುಮಾರು 1000ಕ್ಕೂ ಅಧಿಕ ಮಂದಿ ನೇಜಿ ನೆಡುವ ಕಾರ್ಯದಲ್ಲಿ ಸಂಧಿ ಪಾಡ್ದನದೊಂದಿಗೆ  ಭಾಗಿಯಾದರು.

· 4 ಗದ್ದೆಗಳಲ್ಲಿ ನೇಜಿ ನೆಡುವ ಕಾರ್ಯ ನಡೆಯಿತು.
ದೇವಸ್ಥಾನದ ಬಳಿಯಿಂದ ಪಲ್ಲಕ್ಕಿಯಲ್ಲಿ ನೇಜಿಯನ್ನು ಕಂಬಳದ ಕೋಣ, ಚೆಂಡೆ, ಕೊಂಬು ಕಹಳೆ, ವಾದ್ಯ ಸಂಗೀತಗಳೊಂದಿಗೆ ಕೊಂಡೊಯ್ಯಲಾಯಿತು.


ನೇಜಿ ನೆಡುವ ಕಾರ್ಯದಲ್ಲಿ ಎಲ್ಲರೂ ಸಮವಸ್ತ್ರ ಧರಿಸಿ, ತಲೆಗೆ ಮುಟ್ಟಾಳೆ ಇಟ್ಟು ಭಾಗವಹಿಸಿದ್ದರು.
ನೇಜಿ ನೆಡುವ ಗದ್ದೆಯ ಅಕ್ಕಪಕ್ಕದ ಗದ್ದೆಗಳಲ್ಲಿ ಆನೆ, ಜಿಂಕೆ, ಆಕಳು ಕರು ಮುಂತಾದ ಪ್ರಾಣಿಗಳ ಆಕೃತಿಗಳನ್ನು ಇಟ್ಟಿದ್ದು, ನೈಜ ಪ್ರಾಣಿಗಳಂತೆ ಎಲ್ಲರ ಮನಸೂರೆಗೊಂಡಿತು.

NO COMMENTS

LEAVE A REPLY

Please enter your comment!
Please enter your name here

Exit mobile version