ಬೆೆಳ್ತಂಗಡಿ: ಮೂಡಬಿದ್ರೆಯ ಎಸ್ ಎನ್ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜರಗಿದ ನವತ್ವಂ- 2024 ಎಂಬ ಅಂತರ್ ಕಾಲೇಜು ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿಎಂ ಪಾಲಿಟೆಕ್ನಿಕ್ ಕಾಲೇಜು ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರತ್ಯೇಕವಾಗಿ ಪ್ರಥಮ ಸ್ಥಾನ ಪಡೆದಿರುತ್ತದೆ” ಎಂದು ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಿನ್ಸಿಪಾಲ್ ಸಂತೋಷ್ ಹೇಳಿದರು.
ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
“ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ 2008ರಲ್ಲಿ ಕಾಲೇಜು ಸ್ಥಾಪನೆಗೊಂಡಿದ್ದು ಶ್ರೀ ಧಮಂ ಎಜುಕೇಶನ್ ಸೊಸೈಟಿಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿದೆ.ಕಾಲೇಜು ನವದೆಹಲಿಯ ಎಐಸಿಟಿಇ ಮಾನ್ಯತೆ ಹಾಗೂ ಡಿಟಿಇ ಬೆಂಗಳೂರು ಇವರಿಂದ ಅನುಮೋದನೆಗೆ ಒಳಪಟ್ಟಿದ್ದು ಪಠ್ಯದ ಜತೆಗೆ ಪಠ್ಯೇತರ ಹಾಗೂ ಪೂರಕ ಚಟುವಟಿಕೆಗಳಲ್ಲೂ ಸಾಧನೆ ಮಾಡುತ್ತಾ ಬಂದಿದ್ದು ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳು ಪ್ರಾಜೆಕ್ಟ್ ಸ್ಪರ್ಧೆಗಳಲ್ಲಿ ಲಭಿಸಿವೆ” ಎಂದು ತಿಳಿಸಿದರು.
“ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ
ಪೇಪರ್ ಪ್ಲೈವುಡ್ ಪ್ರಾಜೆಕ್ಟ್ ಅರಣ್ಯ ನಾಶ ಮತ್ತು ತ್ಯಾಜ್ಯ ಸಂಗ್ರಹಣೆಯ ಅಪಾಯಕಾರಿ ಪ್ರಮಾಣವು ಸುಸ್ಥಿರ ಸಂಪನ್ಮೂಲ ಬಳಕೆಗಾಗಿ ನವೀನ ಪರಿಹಾರಗಳನ್ನು ಒದಗಿಸುತ್ತದೆ. ಈ ಯೋಜನೆ ತ್ಯಾಜ್ಯ ಕಾಗದವನ್ನು ಪ್ಲೈವುಡ್ ಆಗಿ ಪರಿವರ್ತಿಸುವ ಕಾರ್ಯ ಸಾಧ್ಯತೆಯನ್ನು ಪರಿಶೋಧಿಸುತ್ತದೆ. ಸಾಂಪ್ರದಾಯಿಕ ಮರದ ಆಧಾರಿತ ಪ್ಲೈವುಡ್ ಉತ್ಪಾದನೆಯ ಪರಿಸರ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಈ ಯೋಜನೆಯು ಕಾಗದ ತಿರುಳನ್ನು ನೈಸರ್ಗಿಕವಾಗಿ ಬೈಂಡರ್ ಗಳೊಂದಿಗೆ ಸಂಯೋಜಿಸುತ್ತದೆ ಹಾಗೂ ರಾಸಾಯನಿಕ ಮುಕ್ತ ಮತ್ತು ಪರಿಸರ ಸ್ನೇಹಿ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ” ಎಂದು ಹೇಳಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಶಸ್ತಿ ದೊರಕಿದ ‘ಮಲ್ಟಿಪರ್ಪಸ್ ಅಗ್ರಿ ಟ್ರಾಲಿ ವಿನ್ಯಾಸ ಮತ್ತು ತಯಾರಿಕೆ’ಯು ಆಧುನಿಕ ಕೃಷಿ ಪದ್ಧತಿಗಳು ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ, ಈ ಬೆಳವಣಿಗೆಯಲ್ಲಿ ಒಂದು ಪ್ರಮುಖ ಅಂಶವೆಂದರೆ ರೈತರು ತಮ್ಮ ಕೆಲಸಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುವಂತಹ ಹೊಸ ಉಪಕರಣಗಳ ಅಭಿವೃದ್ಧಿಯಾಗಿದೆ . ಇದು ಗಾಳಿ ಕಂಪ್ರೆಸರ್ ವ್ಯವಸ್ಥೆ ಹೊಂದಿದ್ದು ರೈತರು ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಪರಿಣಾಮಕಾರಿಯಾಗಿ ಸಿಂಪಡಿಸಲು ಮತ್ತು ಅತ್ಯುತ್ತಮ ಕವರೇಜ್ ಮತ್ತು ಕನಿಷ್ಠ ವ್ಯರ್ಥವನ್ನು ಖಚಿತ ಪಡಿಸಿಕೊಳ್ಳಲು ಒತ್ತಡದ ಸೆಟ್ಟಿಂಗ್ ಗಳನ್ನು ಸರಿ ಹೊಂದಿಸಲು ಸಾಧ್ಯವಾಗಿಸುತ್ತದೆ ಹಾಗೂ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದರು.
ಸಿವಿಲ್ ವಿಭಾಗದ ಎಚ್ ಒಡಿ ತೃಪ್ತಿ ರತನ್ ರೈ,ಉಪನ್ಯಾಸಕರಾದ ಶಿವರಾಜ್, ಸಾಯಿ ಚರಣ್, ಪ್ರವೀಣ್ ಬಿ.ಜಿ., ಕಚೇರಿ ವ್ಯವಸ್ಥಾಪಕ ಚಂದ್ರನಾಥ ಜೈನ್, ಉಪಸ್ಥಿತರಿದ್ದು ಮಾಹಿತಿ ನೀಡಿದರು.