ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್ ಆಸ್ತಿತ್ವಕ್ಕೆ ಬಂದಿದ್ದು, ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟಗಳನ್ನು ನಡೆಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದ ಗುರಿಯನ್ನು ಕೆಆರ್‌ಎಸ್ ಹೊಂದಿದೆ ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಹೇಳಿದರು.
ಅವರು ಸೆ.20ರಂದು ಬೆಳ್ತಂಗಡಿ ಶ್ರೀಗುರುನಾರಾಯಣ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2016ರಲ್ಲಿ ಕೃಷ್ಣರೆಡ್ಡಿಯವರ ನೇತೃತ್ವದಲ್ಲಿ ಈ ಪಕ್ಷ ಸ್ಥಾಪನೆಯಾಗಿದ್ದು, ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಮೂಲಕ ರಾಜ್ಯದ ನೂರಾರು ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಭಿಯಾನ ನಡೆಸುತ್ತಿದೆ. ಸರಕಾರಿ ಕಚೇರಿಗಳಿಗೆ ಬರುವ ಜನಸಾಮಾನ್ಯರಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ, ಬಡವರಿಗೆ ಅನ್ಯಾಯವಾಗುತ್ತಿದೆ. ಯಾವುದೇ ಕೆಲಸ ಲಂಚ ನೀಡದೆ ಆಗುತ್ತಿಲ್ಲ. ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಇದೆ. ಇಂತಹ ವಿಷಯಗಳ ದೂರು ನಮಗೆ ಬಂದಾಗ ನಾವು ಅಮಾಯಕರ ಪರವಾಗಿ ಹೋರಾಟಗಳನ್ನು ನಡೆಸುತ್ತೇವೆ. ಯಾವುದೇ ದೌರ್ಜನ್ಯ ದಬ್ಬಾಳಿಕೆ, ಶೋಷಣೆ, ಅನ್ಯಾಯಗಳು ನಡೆದಾಗ ನಮ್ಮ ಕಾರ್ಯಕರ್ತರು ನ್ಯಾಯ ಒದಗಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿ ಈಗ ಪಕ್ಷ ಆಸ್ತಿತ್ವಕ್ಕೆ ಬಂದಿದ್ದು, ಮುಂದೆ ತಾಲೂಕಿನಲ್ಲಿ ಪಕ್ಷದ ಕಚೇರಿ ಆರಂಭವಾಗಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಹೈದರಾಲಿ, ಪ್ರಧಾನ ಕಾರ್ಯದರ್ಶಿ ರಫೀಕ್ ಉಪ್ಪಿನಂಗಡಿ, ಕಾರ್ಯದರ್ಶಿಗಳಾದ ಆಶ್ರಫ್ ಜಾರಿಗೆಬೈಲ್, ರಮೀಝ್, ನಝೀರ್, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಸಲೀಂ ಜಾರಿಗೆಬೈಲ್, ಶುಕೂರ್ ಜಾರಿಗೆಬೈಲ್, ಜಿಲ್ಲಾ ಸಮಿತಿಯ ಅನೀಸ್ ಉಪಸ್ಥಿತರಿದ್ದರು.