
ಬೆಳ್ತಂಗಡಿ; ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ ನಿವಾಸಿ ತೇಜಲ್ ಕೆ ಆರ್ ಅವರು 20ವರ್ಷ ವಯೋಮಿತಿಯ ವಿಭಾಗದಲ್ಲಿ 110ಮೀ ಹರ್ಡಲ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡು ಪಾಂಡಿಚೇರಿಯಲ್ಲಿ ನಡೆಯಲಿರುವ ದಕ್ಷಿಣ ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಮುಂಡಾಜೆ ನಿವಾಸಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದ ರಾಜೇಶ್ ಕೆ.ವಿ ಹಾಗೂ ಜಿನ್ಸಿ ದಂಪತಿಯರ ಪುತ್ರನಾಗಿರುವ ತೇಜಲ್ ಕೆ.ಆರ್ ಅವರು ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಯಾಗಿದ್ದಾರೆ.

ತೇಜಲ್ ಅವರು 2022ರಲ್ಲಿ ಬೆಂಗಳೂರಿನಲ್ಲಿ ನಡೆದ ಕ್ರೀಡಾಕೂಟದಲ್ಲಿ 16 ವಯೋಮಾನದ ವಿಭಾಗದಲ್ಲಿ ಹರ್ಡಲ್ಸ್ ನಲ್ಲಿ ರಾಜ್ಯ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಪಡೆದಿದ್ದರು, ಮೈಸೂರಿನಲ್ಲಿ ನಡೆದಿದ್ದ ರಾಜ್ಯಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ರೀಡಾಕೂಟದಲ್ಲಿ 110ಮೀ ಹರ್ಡಲ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದಿದ್ದ ಅವರು 2022-23 ರ ಕರ್ನಾಟಕ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 18ವರ್ಷ ವಯೋಮಿತಿಯಲ್ಲಿ ಬೆಳ್ಳಿಯ ಪದಕವನ್ನು ಪಡೆದಿದ್ದರು. ರಾಜ್ಯಮಟ್ಟದ ಹಲವು ಕ್ರೀಡಾಕೂಟಗಳಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ಇವರು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಿದ್ದಾರೆ
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿ ಯಾಗಿರುವ ತೇಜಲ್ ಕೆ.ಆರ್ ಅವರು ಇಲ್ಲಿನ ತರಬೇತುದಾರರಾದ ಶಾಂತರಾಮ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಗ್ರಾಮೀಣ ಪ್ರತಿಭೆ ತೇಜಲ್ ಅವರ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.