ಬೆಳ್ತಂಗಡಿ; ಕೊಕ್ಕಡದಲ್ಲಿ ಅಂಗಡಿಯ ಜಗಲಿಯಲ್ಲಿ ಮಳೆ ಬಂದ ಕಾರಣಕ್ಕೆ ಕುಳಿತ ದಲಿತ ವೃದ್ದನ ಮೇಲೆ ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆಗೆ ಒಳಗಾದ ವ್ಯಕ್ತಿ ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂಬವರಾಗಿದ್ದಾರೆ.ಕೊಕ್ಕಡ ನಿವಾಸಿಯಾಗಿರುವ ರಾಮಣ್ಣ ಗೌಡ ಎಂಬವರೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ.
ಕೊಕ್ಕಡ ಪೇಟೆಗೆ ಹೋಗಿದ್ದ ಮಂಚ ಮೊಗೇರ ಅವರು ಅಲ್ಲಿಂದ ಮನೆಗೆ ಹಿಂತಿರುಗುವ ವೇಳೆ ಮಳೆ ಬಂದಿದೆ ಸುಸ್ತು ಆಗಿದ್ದು ಕೊಕ್ಕಡ ಹಳ್ಳಿಂಗೇರಿಯಲ್ಲಿ ಅಂಗಡಿಯೊಂದರ ಜಗಲಿಯಲ್ಲಿ ಕುಳಿತಿದ್ದಾರೆ. ಈ ವೇಳೆ ಅಲ್ಲಿದ್ದ ರಾಮಣ್ಣ ಗೌಡ ಅವರು ಯಾಕೆ ಅಂಗಡಿ ಜಗಲಿಯಲ್ಲಿ ಕುಳಿತಿದ್ದಿಯಾ ಎಂದು ಪ್ರಶ್ನಿಸಿದ್ದು ಸುಸ್ತಸದ ಕಾರಣಕ್ಕೆ ಕುಳಿತಿದ್ದೇನೆ ಮಳೆ ಬಿಟ್ಟ ಕೂಡಲೇ ಹೋಗುತ್ತೇನೆ ಎಂದು ಹೇಳಿದ್ದಾಗಿಯೂ ಈ ವೇಳೆ ಅಂಗಡಿಯ ಒಳಗೆ ಹೋದ ರಾಮಣ್ಣ ಗೌಡ ಮರದ ರೀಪಿನೊಂದಿಗೆ ಬಂದು ಜಾತಿನಿಂದನೆ ಮಾಡಿ ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾನೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಗೆ ಒಳಗಾದ ಮಂಚ ಮೊಗೇರ ಅವರನ್ನು ಮನೆಯವರು ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ತಲೆಗೆ ಹಾಗೂ ಬೆನ್ನಿಗೆ ಗಾಯಗಳಾಗಿದೆ.
ಧರ್ಮಸ್ಥಳ ಪೊಲೀಸರು ಹಲ್ಲೆಗೆ ಒಳಗಾದವರಿಂದ ಹೇಳಿಕೆಯನ್ನು ಪಡೆದು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.