ಬೆಳ್ತಂಗಡಿ: ಗ್ರಾಮೀಣ ಪ್ರದೇಶಗಳ ಜನರ ಜೀವನದ ನೆರಳಾಗಿರುವ ಧರ್ಮಸ್ಥಳ ಯೋಜನೆಯ ಬಗ್ಗೆ ಸದಾಕಾಲ ಕೃತಜ್ಞತಾ ಭಾವನೆಯನ್ನು ಹೊಂದಿರಬೇಕು ಎಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರರ ಶಿವಪ್ರಸಾದ ಅಜಿಲ ಹೇಳಿದರು.
ಅವರು ಪಿಲ್ಯ ಸರಕಾರಿ ಉ.ಪ್ರಾ. ಶಾಲೆಯಲ್ಲಿ ಆದಿತ್ಯವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಿಲ್ಯ- ಕುದ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿದರು.
ಯೋಜನೆಯಿಂದಾಗಿ ಇಂದು ಸಾವಿರಾರು ಕುಟುಂಬಗಳು ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ತಮ್ಮಲ್ಲಿ ಖಾಲಿ ಜಾಗ ಇದ್ದಲ್ಲಿ ಕೃಷಿಯನ್ನು ವಿಸ್ತರಿಸುವ, ಅದರಲ್ಲೂ ಪರಿಪೂರ್ಣಕೃಷಿಯತ್ತ ಎಲ್ಲರೂ ಗಮನಹರಿಸುವ ಅಗತ್ಯತೆಯನ್ನು ವಿವರಿಸಿದರು.
ಯೋಜನೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನಾಧಿಕಾರಿ ಶ್ರೀನಿವಾಸ ಅವರು, ತನ್ನ ಪ್ರಗತಿಗೆ ಇನ್ನೊಬ್ಬರ ಸಹಾಯಪಡೆದು ಉನ್ನತಿಯಾಗುವುದೇ ಪ್ರಗತಿಬಂಧು ಗುಂಪಿನ ಉದ್ದೇಶ. ಸಂಘದಲ್ಲಿ ಸಾಲ ಪಡೆದು ಅದನ್ನು ಯೋಗ್ಯವಾಗಿ ಬಳಸಿಕೊಂಡರೆ ಆತ ಪರೋಕ್ಷಾಗಿ ದುಪ್ಪಟ್ಟು ಉಳಿತಾಯ ಮಾಡಿದಂತೆ. ಯೋಜನೆಯಿಂದಾಗಿ ಮನೆಯ ಒಲೆ ಉರಿದಿದೆ. ಅದನ್ನು ಯೋಜನೆಯ ವಿರುದ್ದ ಬಳಸಬೇಡಿ ಎಂದರು.
ಯೋಜನಾಧಿಕಾರಿ ದಯಾನಂದ ಪೂಜಾರಿ ಅವರು, ಯೋಜನೆಯು ಲೇವಾದೇವಿ ಮಾಡುವುದಿಲ್ಲ. ಪರೋಕ್ಷವಾಗಿ ದೇಶದ ಅಭಿವೃದ್ದಿಗೆ ಕೆಲಸ ಮಾಡುತ್ತಿದೆ. ಧರ್ಮಾಧಿಕಾರಿ ಡಾl ವೀರೇಂದ್ರ ಹೆಗ್ಗಡೆಯವರ ದೂರದರ್ಶಿತ್ವದ ಯೋಜನೆಯಿಂದಾಗಿ ಸಹಸ್ರಾರು ಮಂದಿ ಸ್ವಾವಲಂಬಿಗಳಾಗಿದ್ದಾರೆ,ಉದ್ಯೋಗಿಗಳಾಗಿದ್ದಾರೆ ಎಂದರು.
ಅಧ್ಯಕ್ಷತೆಯನ್ನು ಪಿಲ್ಯ ಒಕ್ಕೂಟದ ಅಧ್ಯಕ್ಷ ಕೃಷ್ಣರಾಜ ಭಟ್ ವಹಿಸಿದ್ದರು.
ವೇದಿಕೆಯಲ್ಲಿ ಅಳದಂಗಡಿ ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ, ಸ್ವಾತಿ ಕ್ಲಿನಿಕ್ ನ ಡಾl ಸುಷ್ಮಾ ಎಸ್. ಡೋಂಗ್ರೆ, ಜನಜಾಗೃತಿ ವಲಯಾಧ್ಯಕ್ಷ ನಾರಾಯಣ ಸಾಲ್ಯಾನ್, ಪಿಲ್ಯ ಹಾಗೂ ಕುದ್ಯಾಡಿ ಒಕ್ಕೂಟದ ನೂತನ ಅಧ್ಯಕ್ಷರುಗಳಾದ ಶೈಲೇಶ್ ಮತ್ತು ಭಾರತಿ, ಪದಾಧಿಕಾರಿಗಳು ಇದ್ದರು.
ನಾಟಿ ವೈದ್ಯ ಬೇಬಿ ಪೂಜಾರಿ ಪುಣ್ಕೆತ್ಯಾರು ಅವರನ್ನು ಸಮ್ಮಾನಿಸಲಾಯಿತು. 30 ವರ್ಷಗಳಾದ ಸ್ವ- ಸಹಾಯ ಸಂಘಗಳನ್ನು ಗುರುತಿಸಲಾಯಿತು. ಹಿರಿಯ ಸದಸ್ಯರುಗಳನ್ನು ಸಮ್ಮಾನಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ರೀಟಾ ಇಸಬೆಲ್ಲ ಪಿಂಟೋ ಅವರು ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು.
ಅಳದಂಗಡಿ ವಲಯ ಮೇಲ್ವಿಚಾರಕಿ ಸುಮಂಗಳ
ಸ್ವಾಗತಿಸಿದರು. ಸೇವಾಪ್ರತಿನಿಧಿ ಹರಿಣಾಕ್ಷಿ ಲತೀಶ್ ವರದಿ ಮಂಡಿಸಿದರು. ಕಾವ್ಯ ವಂದಿಸಿದರು. ಶೈಲೇಶ್ ಕಾರ್ಯಕ್ರಮ ನಿರ್ವಹಿಸಿದರು.