ಬೆಳ್ತಂಗಡಿ : ಇಂದಬೆಟ್ಟು ಗ್ರಾಮ ಪಂಚಾಯತ್ ನ 2021-22 ಸಾಲಿನ ವಿವಿಧ ಕಾಮಗಾರಿಯಲ್ಲಿ ನಡೆದ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ
ನಡೆಸಿ ವರದಿ ನೀಡಿದ್ದು
ಇಂದಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ ಇಂಜಿನಿಯರ್ ಗಳು ಹಾಗೂ ಅಂದಿನ ಅಭಿವೃದ್ಧಿ ಅಧಿಕಾರಿಯವರು ಕರ್ತವ್ಯ ಲೋಪ ಎಸಗಿರುವುದಾಗಿ ವರದಿ ನೀಡಿದೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ 15 ನೇ ಹಣಕಾಸಿನ ಯೋಜನೆಯ 2021-22 ರಲ್ಲಿ ನಡೆದ ವಿವಿಧ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಬಂಗಾಡಿ ನಿವಾಸಿ ಜಯರಾಮ.ಕೆ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಈ ಸಂಬಂಧ ಬೆಂಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಇದೀಗ ಜಯರಾಮ ಅವರು ಮಾಡಿರುವ ಆರೋಪಗಳು ಸತ್ಯವಾಗಿದ್ದು ಕರ್ತವ್ಯ ಲೋಪವೆಸಗಿರುವವರ ವಿರುದ್ದ ಕ್ರಮ ಕೈಗೊಳ್ಳಲು ವರದಿಯನ್ನು ಹಿರಿಯ ಅಧಿಕಾರಿಗಳಿಗೆ ನೀಡಿದ್ದಾರೆ. ಲೋಕಾಯುಕ್ತ ಪೊಲೀಸರು ಗ್ರಾಮ ಪಂಚಾಯತ್ ನಲ್ಲಿ 13 ಕಾಮಗಾರಿಯಲ್ಲಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ. ಅದಲ್ಲದೆ ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ಭ್ರಷ್ಟಾಚಾರ ಮಾಡಿದರಲ್ಲಿ 7 ಅಂಶಗಳನ್ನು ಅಭಿಪ್ರಾಯವನ್ನು ಬಹಿರಂಗಪಡಿಸಿದ್ದಾರೆ.
ಜು.9,10 ರಂದು ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಯ ಹಿರಿಯ ಉಪ ನಿರ್ದೇಶಕರು ತಾಂತ್ರಿಕ ವಿಭಾಗದ ಇಂಜಿನಿಯರ್ ಪ್ರಕಾಶ್ ಬಣಕಾರ್ ಮತ್ತು ಸಹಾಯಕ ಇಂಜಿನಿಯರ್ ತೇಜಶ್ರೀ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳ ನೇತೃತ್ವದ ತಂಡ ಇಂದಬೆಟ್ಟು ಗ್ರಾಮ ಪಂಚಾಯತ್ ಗೆ ಆಗಮಿಸಿ ತನಿಖೆ ನಡೆಸಿದ್ದರು.
ತನಿಖೆಯಲ್ಲಿ ಕಾಮಗಾರಿಗಳಲ್ಲಿ ಕಂಡುಬಂದಿರುವ ನ್ಯೂನ್ಯತೆಗಳನ್ನು ಅಧಿಕಾರಿಗಳು ಸ್ಪಷ್ಟವಾಗಿ ಗುರುತಿಸಿದ್ದಾರೆ.
ಕಾಮಗಾರಿಗಳನ್ನು ಯಾವುದೇ ಗುತ್ತಿಗೆ ನೀಡದೆ ತುಂಡು ಗುತ್ತಿಗೆ ನೀಡಿ ನಿರ್ವಹಿಸಲಾಗಿದೆ, ಕಾಮಗಾರಿಗಳ ಅಳತೆ ಪುಸ್ತಕದಲ್ಲಿ ಯಾವುದೇ ಸಮರ್ಕವಾದ ಮಾಹಿತಿಗಳಿಲ್ಲ, ಕಾಮಗಾರಿಯ ಆರಂಭದ ಸ್ಥಳ ಮತ್ತು ಕೊನೆಯಾದ ಸ್ಥಳದ ದಾಖಲೆಗಳಿಲ್ಲ ಹಾಗೂ ಜಿಪಿಎಸ್ ಫೊಟೋಗಳಿಲ್ಲ, ಆಮಗವಿಕಲರ ಹಾಗೂ ಎಸ್.ಸಿ, ಎಸ್.ಟಿ ವಿಭಾಗಕ್ಕೆ ಬೇಕಾದ ಕಾಮಗಾರಿಗಳನ್ನು ರೂಪಿಸಿಲ್ಲ, ವಿದ್ಯುತ್ ಉಪಕರಣಗಳಿಗೆ ಸಂಭಂಧಿಸಿದ ಕಾಮಗಾರಿಗಳನ್ನು ಅಂದಾಜು ಪಟ್ಟಿಯೇ ಇರುವುದಿಲ್ಲ,
ಹಲವಾರು ಬದಲಿ ಕಾಮಗಾರಿಗಳನ್ನು ಮಾಡಲಾಗಿದ್ದು ಅದರ ದಾಖಲೆಗಳು ಸಮರ್ಪಕವಾಗಿಲ್ಲ, ರಸ್ತೆಬದಿಯ ಕಾಡು ತೆಗೆದಿರುವ ಹಾಗೂ ರಸ್ತೆಗೆ ಚರಳ್ ಹಾಕಿರುವ ಕಾಮಗಾರಿಗಳಲ್ಲಿ ಪಾರದರ್ಶಕವಾಗಿಲ್ಲ. ಈ ಕಾಮಗಾರಿಗಳು ನಡೆದಿದೆಯೇ ಎಂದು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಚಾರಗಳನ್ನು ತನಿಖೆ ನಡೆಸಿದ ಅಧಿಕಾರಿಗಳು ಗುರುತಿಸಿ ವರದಿ ನೀಡಿದ್ದಾರೆ.
ಅಧ್ಯಕ್ಷರು, ಪಿಡಿಒ, ಆಧಿಕಾರಿಗಳಿಂದ ಲೋಪ
ಬೆಂಗಳೂರು ಲೋಕಾಯುಕ್ತ ತಾಂತ್ರಿಕ ವಿಭಾಗದ ಲೆಕ್ಕ ಪರಿಶೋಧನ ಅಧಿಕಾರಿ ಹಾಗೂ ತನಿಖಾಧಿಕಾರಿ ಬಣಕಾರ್ ಪ್ರಕಾಶ್ ಕುಮಾರ್ ಮತ್ತು ತಾಂತ್ರಿಕ ವಿಭಾಗದ ಸಹಾಯಕ ಇಂಜಿಯರ್ ತೇಜ.ಶ್ರಿ.ಮದ್ದೋಡಿ ಅವರು ತನಿಖೆ ನಡೆಸಿದ ವರದಿಯಲ್ಲಿ ಇಂದಬೆಟ್ಟು ಗ್ರಾಮಪಂಚಾಯತಿನ ಕಾಮಗಾರಿಗಳಲ್ಲಿ ಲೋಪಗಳಾಗಲು ಕಾರಣರಾದವರನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆ ಅದರಂತೆ ಬೆಳ್ತಂಗಡಿ ಪಂಚಾಯತ್ ರಾಜ್ ಸಹಾಯಕ ಇಂಜಿನಿಯರ್ ಹರ್ಷಿತ್ , ಅಂದಿನ ಪಿಡಿಓ ಸವಿತಾ, ಇಂದಬೆಟ್ಟು ಗ್ರಾ.ಪಂ ಅಂದು ಅಧ್ಯಕ್ಷರಾಗಿದ್ದ ಅನಂದ.ಎ, ಹಾಗೂ ನಿವೃತ್ತ ಪಂಚಾಯತ್ ರಾಜ್ ಕಿರಿಯ ಇಂಜಿನಿಯರ್ ಮೊಹಮ್ಮದ್ ಪಿ ಇವರು ನಾಲ್ಕು ಜನ ಕರ್ತವ್ಯ ಲೋಪ ಎಸಗಿರುವುದಾಗಿ ವರದಿ ನೀಡಿದ್ದು ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ನಾಲ್ಕು ಜನರ ವಿರುದ್ಧ ಕ್ರಮ ಕೈಗೊಳ್ಳಲು ಆ.5 ರಂದು ವರದಿ ಸಲ್ಲಿಸಿದ್ದಾರೆ.