ಬೆಳ್ತಂಗಡಿ: ಸ್ವ-ಉದ್ಯೋಗದಿಂದ ಆರ್ಥಿಕ ಪ್ರಗತಿಯೊಂದಿಗೆ ಸ್ವಾವಲಂಬಿ ಜೀವನ ಸಾಧ್ಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ದೇಶದಾದ್ಯಂತ ಇರುವ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆಗಳ ನಿರ್ದೇಶಕರುಗಳ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿ ಪಡೆದವರು ಸ್ಥಳೀಯ ಸಂಪನ್ಮೂಲ ಹಾಗೂ ಬೇಡಿಕೆಗಳಿಗೆ ಅನುಗುಣವಾಗಿ ಸ್ವ-ಉದ್ಯೋಗ ಪ್ರಾರಂಭಿಸಿ, ಸಾಲದ ಹಣವನ್ನು ಸದುಪಯೋಗ ಮಾಡಿ, ಕೌಲಾಭಿವೃದ್ಧಿಯೊಂದಿಗೆ ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸುವಂತೆ ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳು ಸಕಾಲಿಕ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕು. ಯಾವುದೇ ಸಮಸ್ಯೆಗಳು, ಸವಾಲುಗಳು ಉಂಟಾದಾಗ ಅದನ್ನು ಪರಿಹರಿಸಲು ಸಹಕರಿಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.

ತರಬೇತಿ ಪಡೆದವರು ಇರುವ ಊರಿನಲ್ಲೆ ಅಲ್ಪ ಬಂಡವಾಳದೊಂದಿಗೆ ಸ್ವ-ಉದ್ಯೋಗ ಪ್ರಾರಂಭಿಸಿದರೆ ಗ್ರಾಮೀಣ ಪ್ರದೇಶವರು ನಗರಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಬಹುದು.
ಸೇವಾಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಬಳಕೆಯಿಂದ ಅನೇಕ ಕ್ಷಿಪ್ರಪರಿವರ್ತನೆಗಳಾಗುತ್ತಿದ್ದ ಬದಲಾದ ವಿದ್ಯಮಾನಕ್ಕೆ ಸ್ವ-ಉದ್ಯೋಗಿಗಳು ಹೊಂದಿಕೊಳ್ಳಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಕೆನರಾ ಬ್ಯಾಂಕ್ ಪ್ರಧಾನ ಕಾರ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್ ಶುಭಾಶಂಸನೆ ಮಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಯೊಂದಿಗೆ ಸಮಾಜದ ಆರ್ಥಿಕ ಪ್ರಗತಿಗೆ ರುಡ್‌ಸೆಟ್ ಸಂಸ್ಥೆಗಳ ಸೇವೆ, ಕೊಡುಗೆ ಅಮೂಲ್ಯವಾಗಿದೆ. ಬಡವರು ಮತ್ತು ಅವಕಾಶ ವಂಚಿತರು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ರುಡ್‌ಸೆಟ್ ಸಂಸ್ಥೆಗಳ ನಿರ್ದೇಶಕರ ಸೇವೆಯನ್ನು ಅವರು ಶ್ಲಾಘಿಸಿದರು.

ಕೆನರಾ ಬ್ಯಾಂಕ್‌ನ ಮುಖ್ಯ ಮಹಾಪ್ರಬಂಧಕ ಕೆ.ಜೆ. ಶ್ರೀಕಾಂತ್ ಮಾತನಾಡಿ, ಕೇಂದ್ರ ಸರ್ಕಾರವು ಆರ್ಥಿಕ ಪ್ರಗತಿಗೆ ಆದ್ಯತೆ ನೀಡುತ್ತಿದ್ದು ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಯನ್ನು ಸರಳಗೊಳಿಸಲಾಗಿದೆ. ಸ್ವಯಂ ಉದ್ಯೋಗ ಮಾಡುವವರು ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ಕೌಶಲವನ್ನೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆನರಾ ಬ್ಯಾಂಕ್ ಮಂಗಳೂರು ವೃತ್ತದ ಮಹಾಪ್ರಬಂಧಕ ಸುಧಾಕರ ಕೊಠಾರಿ ಮಾತನಾಡಿ ಶುಭ ಹಾರೈಸಿದರು.
ರುಡ್‌ಸೆಟ್ ಸಂಸ್ಥೆಗಳ ಕೇಂದ್ರೀಯ ಕಾರ್ಯಾಲಯದ ನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಸ್ವಾಗತಿಸಿದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಧನ್ಯವಾದವಿತ್ತರು. ಹಿರಿಯ ಉಪನ್ಯಾಸಕಿ ಅನಸೂಯ ಕಾರ್ಯಕ್ರಮ ನಿರ್ವಹಿಸಿದರು.
