ಬೆಳ್ತಂಗಡಿ; ಪ್ರಸಕ್ತ ವರ್ಷ ರಬ್ಬರ್ ಬೆಳೆಗೆ ಬೆಲೆ ಏರಿಳಿತಗಳನ್ನು ಕಂಡಿದ್ದರೂ, ರಬ್ಬರ್ ಬೆಳೆಗಾರರು ಭರವಸೆ ಆತ್ಮವಿಶ್ವಾಸ ಕಳೆದುಕೊಳ್ಳುವ ಅಗತ್ಯವಿಲ್ಲ, ರಬ್ಬರ್ ಕೃಷಿಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ವತಿಯಿಂದ ಅನೇಕ ಯೋಜನೆಗಳನ್ನು ರೂಪಿಸಲಾಗಿದೆ” ಎಂದು ಉಜಿರೆ ರಬ್ಬರ್ ಸೊಸೈಟಿ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು
ಅವರು ಗುರುವಾರ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯ ಲ್ಲಿ ಮಾತನಾಡಿದರು.
ರಬ್ಬರ್ ಗೆ ಉತ್ತಮ ಬೇಡಿಕೆ ಇದ್ದು, ಪ್ರಸ್ತುತ ಉತ್ಪಾದನೆ ಕಡಿಮೆ ಇದೆ. ಈ ಕಾರಣದಿಂದ ಮುಂದಿನ ಕೆಲವು ವರ್ಷ ದರ ತೀರಾ ಕುಸಿಯುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
“ಕೃಷಿಕರ ಭವಿಷ್ಯದ ದೃಷ್ಟಿಯಲ್ಲಿ ಬೆಂಗಳೂರಿನ ಬ್ಯಾಂಬೂ ಸೊಸೈಟಿಯೊಂದಿಗೆ ಸೇರಿ ಬಿದಿರು ಕೃಷಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘದ ಮೂಲಕ 5000 ಗಿಡಗಳನ್ನು ರೈತರಿಗೆ ವಿತರಿಸಲಾಗಿದೆ. ಆರು ವರ್ಷ ಅವಧಿಯ ಈ ಕೃಷಿಗೆ ಬ್ಯಾಂಬೂ ಸೊಸೈಟಿಯಿಂದ ಮೊದಲ ವರ್ಷ ಪ್ರತಿ ಗಿಡಕ್ಕೆ 100ರೂ., ಎರಡನೇ ಮತ್ತು ಮೂರನೇ ವರ್ಷ ತಲಾ 50ರೂ. ಧನಸಹಾಯ ಸಿಗಲಿದೆ” ಎಂದು ಹೇಳಿದರು.

“ಸಂಘದ ಸದಸ್ಯರಿಗೆ ಬೋನಸ್ ಹಾಗೂ ಸಬ್ಸೀಡಿಗಳನ್ನು ನೀಡಲಾಗಿದೆ. ಇದು ಸಂಘಕ್ಕೆ ನಿರಂತರ ರಬ್ಬರ್ ಪೂರೈಸುವ ಹಾಗೂ ರಬ್ಬರ್ ಸೊಸೈಟಿಯಿಂದ ಸಾಮಗ್ರಿ ಖರೀದಿಸುವ ಸದಸ್ಯರಿಗೆ ಅನ್ವಯವಾಗುತ್ತದೆ. ರಬ್ಬರ್ ಸೊಸೈಟಿಯಲ್ಲಿ ರಬ್ಬರ್ ದಾಸ್ತಾನು ಇಡುವ ಯೋಜನೆ ಇದ್ದು ಈ ವರ್ಷ ಬೆಲೆ ಏರಿಕೆಯಿಂದ ಸದಸ್ಯರಿಗೆ ಸುಮಾರು 6.3 0 ಕೋಟಿ ರೂ. ಲಾಭ ದೊರಕಿದೆ” ಎಂದರು.
“ಬೆಲೆ ಇಳಿಕೆ ವೇಳೆ ಸರಕಾರಕ್ಕೆ ರಬ್ಬರ್ ಕೃಷಿಕರ ಹಿತ ದೃಷ್ಟಿಯಲ್ಲಿ ಅನೇಕ ಮನವಿಗಳನ್ನು ನೀಡಲಾಗಿದ್ದರು ಇದುವರೆಗೆ ಯಾವುದೆ ಸ್ಪಂದನೆ ದೊರಕಿಲ್ಲ. ಸಂಘವು ವರದಿ ವರ್ಷದಲ್ಲಿ 6,421 ಕೆಜಿ ಕಾಳುಮೆಣಸು ಖರೀದಿ ಮಾಡಿದೆ. ರಸಗೊಬ್ಬರ ಮಾರಾಟ ವಿಭಾಗದಲ್ಲಿ 582 ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ” ಎಂದು ತಿಳಿಸಿದರು.
ಉಪಾಧ್ಯಕ್ಷ ಅನಂತಭಟ್, ನಿರ್ದೇಶಕರಾದ ಜಯಶ್ರೀ ಡಿ.ಎಂ., ಆರ್. ಸುಭಾಷಿಣಿ, ಬೈರಪ್ಪ, ಕೆ. ರಾಮ ನಾಯ್ಕ,ಇ. ಸುಂದರ ಗೌಡ, ಪದ್ಮ ಗೌಡ ಎಚ್., ಕೆ.ಜೆ. ಆಗಸ್ಟಿನ್, ವಿ.ವಿ. ಅಬ್ರಹಾಂ, ಬಾಲಕೃಷ್ಣ ಗೌಡ ಕೆ., ಅಬ್ರಹಾಂ ಬಿ.ಎಸ್. ಮತ್ತು ಸಿಇಒ ರಾಜು ಶೆಟ್ಟಿ ಉಪಸ್ಥಿತರಿದ್ದರು.