

ಬೆಳ್ತಂಗಡಿ: ವಿದೇಶ ದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿಯ ಒಬ್ಬ ವಿಧ್ಯಾರ್ಥಿ ಸೇರಿದಂತೆ ಇಬ್ಬರನ್ನು ಮಂಗಳೂರು ನಗರ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಆರೋಪಿಗಳಿಂದ ಏರ್‌ಟೆಲ್ ಕಂಪೆನಿಯ 86 ಸಿಮ್ ಕಾರ್ಡಗಳು, 2 ಮೊಬೈಲ್ ಪೋನ್‌ಗಳು, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ನಿವಾಸಿ ಗಳಾದ ಶಮದ್ ಮಹಮ್ಮದ್ ಸಮರ್ (26ವ) ಮತ್ತು ಮಹಮ್ಮದ್ ಅಜೀಂ (19ವ) ಬಂಧಿತರು. ಶಮದ್ ಮಂಗಳೂರು ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ಬಾಡಿಗೆ ಮನೆಯಲ್ಲಿದ್ದ. ಮಹಮ್ಮದ್ ಅಜೀಂ ಕೂಡ ಮಂಗಳೂರು ನಗರದಲ್ಲೇ ಬಾಡಿಗೆ ಮನೆಯಲ್ಲಿದ್ದ. ಇವರು ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್‌ನ ಸಾಜೀದ್‌ನ ಸೂಚನೆಯಂತೆ ತಮ್ಮ ಗೆಳೆಯರು, ಪರಿಚಿತರಿಗೆ, ಸ್ವಲ್ಪ ಹಣ ನೀಡಿ ಪುಸಲಾಯಿಸಿ ಅವರಿಂದ ಸಿಮ್‌ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಆರೋಪಿಗಳು ಕಳೆದ ಜನವರಿಯಿಂದಲೇ ಈ ದಂಧೆ ನಡೆಸುತ್ತಿದ್ದು, ಇದುವರೆಗೆ 400 ರಿಂದ 500 ಸಿಮ್ ಕಾರ್ಡ್‌ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ತಮ್ಮ ಗೆಳೆಯರು, ಪರಿಚಿತರಿಗೆ 200ರಿಂದ 300 ರೂ. ನೀಡಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಅದನ್ನು ಮುಸ್ತಾಫ ಮತ್ತು ಸಾಜೀದ್‌ಗೆ ನೀಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೈಬರ್ ವಂಚಕರಿಗಾಗಿ ಭಾರತದ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ನೀಡಲಾಗುತ್ತಿತ್ತು. ಭಾರತೀಯ ಸಿಮ್‌ಗಳಾದರೆ ಆ ಸಂಖ್ಯೆಯನ್ನು ಬಳಸಿ ಭಾರತೀಯರನ್ನು ನಂಬಿಸಿ ವಂಚಿಸುವುದು ಸುಲಭ ಎಂಬುದು ವಂಚಕರ ಲೆಕ್ಕಾಚಾರ ಆಹಿನ್ನಲೆಯಲ್ಲಿ ಇಲ್ಲಿ ಭಾರೀ ಪ್ರಮಾಣದಲ್ಲಿ ಸಿಮ್ ಗಳನ್ನು ಖರೀದಿಸುವ ಕಾರ್ಯ ಮಾಡುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಂದ ವ್ಯಕ್ತವಾಗುತ್ತಿದೆ.
ಪೊಲೀಸರು ಒಟ್ಟು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು ಇನ್ನಷ್ಟು ಮಾಹಿತಿಗಳು ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.







