ಬೆಳ್ತಂಗಡಿ; ಅಂದು ಭಾರತೀಯರನ್ನು ಗುಲಾಮರನ್ನಾಗಿರಿಸಿದ, ದೇಶದ ಸಂಪತ್ತನ್ನು ಕೊಳ್ಳೆಹೊಡೆಯುತ್ತಿದ್ದ ಬ್ರಿಟೀಶರನ್ನು ಬಾರತ ಬಿಟ್ಟು ತೊಲಗಲು ಕರೆ ನೀಡಿ ಯಶಸ್ವಿಯಾದ ದೇಶದ ದುಡಿಯುವ ವರ್ಗಕ್ಕೆ, ಇಂದು ಶ್ರಮಜೀವಿಗಳನ್ನು ಶೋಷಿಸುವ, ಅವರ ಬದುಕನ್ನು ಕಸಿಯುವ ಕಾರ್ಪರೇಟು ಸಂಸ್ಥೆಗಳ ಮಾಲಕರೇ ಭಾರತ ಬಿಟ್ಟು ತೊಲಗಿರಿ ಎಂದು ಹೋರಾಡುವುದು ಅನಿವಾರ್ಯವಾಗಿದೆ ಎಂದು ಸಿಐಟಿಯು ಜಿಲ್ಲಾ ಉಪಾದ್ಯಕ್ಷರಾದ ಬಿ.ಎಂ.ಭಟ್ ಹೇಳಿದರು.
ಅವರು ಕ್ವಿಟ್ ಇಂಡಿಯಾ ಚಳವಳಿಯ ವರ್ಷಾಚರಣೆಯ ಭಾಗವಾಗಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟುಯು ನೇತೃತ್ವದಲ್ಲಿ ಕಾರ್ಮಿಕರ ಹಕ್ಕು ಕಸಿಯುವವರೇ ಭಾರತ ಬಿಟ್ಟು ತೊಲಗಿರಿ ಎಂದು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ದುಡಿತಕ್ಕೆ ತಕ್ಕ ವೇತನ ನೀಡದ, ಉದ್ಯೋಗ ಭದ್ರತೆ ಒದಗಿಸದ, ಕೆಲಸದ ಅವದಿ ಹೆಚ್ಚಿಸಿ ದುಡಿತಕ್ಕೆ ತಕ್ಕ ವೇತನ ನೀಡದೆ ಶೋಷಿಸುವ ಕಾರ್ಪರೇಟ್ ಬಂಡವಾಳಿಗರು ಇಂದು ನಮ್ಮ ದೇಶದ ಆಡಳಿತದ ಚುಕ್ಕಾಣಿ ಹಿಡಿದು ಶ್ರಮಿಕರಿಗೆ ಮೋಸ ಮಾಡುತ್ತಿದ್ದಾರೆ.
ಅಂದು ಬ್ರೀಟಿಶರಿಂದ ಆಗುತ್ತಿದ್ದ ಲೂಟಿ, ಶೋಷಣೆ ಇಂದು ಕಾರ್ಪರೇಟುಗಳಿಂದ ನಡೆಯುತ್ತಿದೆ ಎಂದರು. ಈ ಕಾರ್ಪರೇಟುಗಳ ರಕ್ಷಣೆ ಮಾಡುತ್ತಾ ಇರುವ ನಮ್ಮನ್ನಾಳುವ ಸರಕಾರಗಳು ಪ್ರಜಾಪ್ರಭುತ್ವದ ಹೆಸರಲ್ಲಿ ಸರ್ವಾದಿಕಾರಿಯಾಗಿ ಆಡಳಿತ ನಡೆಸುತ್ತಿವೆ. ಇದೀಗ ಎನ್,ಡಿ,ಎ, ಸರಕಾರ ಕಾರ್ಮಿಕ ಹಕ್ಕು ಸವಲತ್ತುಗಳ ಕಾನೂನುಗಳನ್ನೇ ರದ್ದು ಪಡಿಸಿ ಕಾರ್ಪರೇಟುಗಳ ರಕ್ಷಣೆ ಮಾಡುವ, ಅವರ ಪರವಾದ ಕಾನೂನುಗಳ ತರಲು ಹೊರಟಿದೆ. ಈ ರೀತಿ ಕಾರ್ಪರೇಟುಗಳ ಶೋಷಣೆಗೆ ಬೆಂಗಾವಲಾಗಿ ನಿಂತ ಬಿಜೆಪಿ ಸರಕಾರದ ದೋರಣೆಯನ್ನು ಕಾರ್ಮಿಕ ವರ್ಗ ಖಂಡಿಸುತ್ತದೆ. ಹಿಟ್ಲರ್ ತನ್ನ ವಿರುದ್ದ ಧ್ವನಿ ಎತ್ತಿದವರನ್ನು ಜೈಲಿಗೆ ತಳ್ಳುತ್ತಿದ್ದಂತೆ ಇಂದು ಮೋದಿ ಸರಕಾರ ತನ್ನ ವಿರೋದಿಗಳನ್ನು ಅಕ್ರಮವಾಗಿ ಜೈಲಿಗೆ ಹಾಕಲು ಹೊರಟಿದೆ ಎಂದು ಟೀಕಿಸಿದರು. ಅಂದು ಬ್ರೀಟೀಶರ ವಿರುದ್ದ ನಡೆಸುವ ಹೋರಾಟಗಳು ದೇಶ ದ್ರೋಹ ಎಂದು ಪ್ರಕರಣ ದಾಖಲಾಗುತ್ತಿದ್ದರೆ ಇಂದು ಪ್ರಜಾಪ್ರಭುತ್ವ ರಾಷ್ಟ್ರ ಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಮೇಲೆ ಸರಕಾರದ ತಪ್ಪುಗಳನ್ನು ಪ್ರಶ್ನೆ ಮಾಡಿದರೆ ದೇಶ ದ್ರೋಹದ ಕೇಸು ದಾಖಲಿಸುವ ವ್ಯವಸ್ಥೆ ಜಾರಿಯಾಗಿದೆ ಎಂದು ಟೀಕಿಸಿದರು. ಇಂತಹ ಅನ್ಯಾಯಗಳ ವಿರುದ್ದ ಹೋರಾಡುವುದೇ ನಿಜವಾದ ದೇಶ ಪ್ರೇಮ ಭಾರತದ ಜನರ ರಕ್ಷಣೆಗಾಗಿ ಹೋರಾಡುವುದೇ ದೇಶ ಪ್ರೇಮ, ಅದುವೇ ಧರ್ಮ ರಕ್ಷಣೆಯ ಕೆಲಸ ಎಂದರು
ಸಿಐಟಿಯು ತಾಲೂಕು ಕಾರ್ಯದರ್ಶಿ ಲೋಕೇಶ್ ಕುದ್ಯಾಡಿ ಸ್ವಾಗತಿಸಿದರು. ಪ್ರಧಾನ ಮಂತ್ರಿಗೆ ನೀಡುವ ಮನವಿಯನ್ನು ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರ ಸಂಘದ ಅದ್ಯಕ್ಷರಾದ ಈಶ್ವರಿ ಓದಿದರು. ಸಂಘದ ಕಾರ್ಯದರ್ಶಿ ಜಯಶ್ರೀ ವಂದಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅದ್ಯಕ್ಷರಾದ ಧನಂಜಯ ಗೌಡ, ಅಟೋ ಸಂಘದ ತಾಲೂಕು ಕಾರ್ಯದರ್ಶಿ ರಾಮಚಂದ್ರ, ಸಿಐಟಿಯು ಮುಖಂಡರುಗಳಾದ ಜಯರಾಮ ಮಯ್ಯ, ಅಶ್ವಿತ, ಉಷಾ, ಕುಮಾರಿ ಮೊದಲಾದವರು ಇದ್ದರು.