ಬೆಳ್ತಂಗಡಿ; ಕಳೆದ ಒಂದುವರ್ಷದಿಂದ ಹೆದ್ದಾರಿ ಕಾಮಗಾರಿಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದೇವೆ, ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿಯ ಯಾವ ಫ್ಯಾಕ್ಟರಿ ಯಲ್ಲಿಯೂ ಕೆಲಸಮಾಡಲು ಸಾಧ್ಯವಾಗುತ್ತಿಲ್ಲ. ನಮಗೂ ಬದುಕುವ ಹಕ್ಕಿದೆ ಅದನ್ನು ಕಸಿದುಕೊಳ್ಳಬೇಡಿ ಎಂದು ಲಾಯಿಲ ಕೈಗಾರಿಕಾ ವಸಾಹತು ಉಳಿಸಿ ಸಮಿತಿಯ ಸಂಚಾಲಕ ಪ್ರಶಾಂತ್ ಸರಕಾರ ಅಧಿಕಾರಿಗಳನ್ನು ಒತ್ತಾಯಿಸಿದರು.
ಲಾಯಿಲ ಕಾಶಿಬೆಟ್ಟುವಿನಲ್ಲಿ ಕೈಗಾರಿಕಾ ವಸಾಹತಿನ ಎದುರು ಸಂಕಷ್ಟದಲ್ಲಿರುವ ಉದ್ಯಮಿಗಳು ಶುಕ್ರವಾರ ಅಗೆದು ಹಾಕಿರುವ ಹೆದ್ದಾರಿಯ ಬದಿಯಲ್ಲಿ ನಡೆಸಿದ ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿ ಅವರು ಮಾತನಾಡಿದರು.
ಕೈಗಾರಿಕಾ ವಸಾಹತುವಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ ಅದನ್ನು ಸರಿಪಡಿಸಿಕೊಡುವಂತೆ ಹಾಗೂ ಮಳಿಗೆಗಾಲಿಗೆ ಕೆಸರು ನೀರು ನುಗ್ಗದಂತೆ ಕ್ರಮ ಕೈಗೊಳ್ಳುವಂತೆ ಕಳೆದ ಹಲವು ತಿಂಗಳಿಂದ ವಿನಂತಿಸುತ್ತಿದ್ದೇವೆ ಆದರೆ ಶಾಸಕರು ಅಧಿಕಾರಿಗಳು ಯಾರೂ ಸ್ಪಂದಿಸುತ್ತಿಲ್ಲ. ಸರಕಾರದ ಅಧಿಕಾರಿಗಳ ಗಮನ ಸೆಳೆಯಲು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಇನ್ನು ವ್ಯವಸ್ಥೆ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಬೇಕಾಗಬಹುದು ಅಂದರು.
ಸಾಂಕೇತಿಕ ಪ್ರತಿಭಟನೆಯಲ್ಲಿ ಉದ್ಯಮಿ ವೆಂಕಟ್ರಮಣ ಭಟ್, ಮುಷ್ತಾಕ್ ಅಹಮ್ಮದ್, ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಹಾಗೂ ಇತರರು ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವಹಣಾ ಅಧಿಕಾರಿ ಭವನಿ ಶಂಕರ್ ಅವರು ಭೇಟಿ ನೀಡಿ ಪ್ರತಿಭಟನಾ ಕಾರರೊಂದಿಗೆ ಮಾತುಕತೆ ನಡೆಸಿದರು. ತಾತ್ಕಾಲಿಕವಾಗಿ ಕೈಗಾರಿಕಾ ವಸಾಹತುವಿನ ಒಳಗಿರುವ ಚರಂಡಿಗಳನ್ನು ಸರಿಪಡಿಸಲು ಲಾಯಿಲ ಗ್ರಾ.ಪಂ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಾಣುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ರಸ್ತೆಕಾಮಗಾರಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಪ್ರತಿಭಟನಾಕಾರರು ರಸ್ತೆಯಲ್ಲಿ ದೊಡ್ಡ ಹೊಂಡದಲ್ಲಿ ವಾಹನಗಳು ಬಿದ್ದಿ ಮೇಲೇಳುತ್ತಿರುವ ದುಸ್ಥಿತಿ ನೋಡಿ ಹೊಂಡಕ್ಕೆ ಕಲ್ಲುಗಳನ್ನು ಹಾಕಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.