ಬೆಳ್ತಂಗಡಿ; ತಾಲೂಕಿನಲ್ಲಿ ಪೂಂಜಾಲಕಟ್ಟೆಯಿಂದ ಚಾರ್ಮಾಡಿಯ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪ್ರಯಾಣಿಕರು ಅನುಭವಿಸುತ್ತಿರುವ ಸಂಕಟಗಳು ಒಂದೆಡೆಯಾದರೆ ರಸ್ತೆಯ ಬದಿಗಳಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿ ಸಂಕಷ್ಟದಲ್ಲಿದ್ದಾರೆ. ಇದೀಗ ಕಾಶೀಬೆಟ್ಟುವಿನಲ್ಲಿರುವ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಲಕ್ಷಾಂತರ ಸಾಲಮಾಡಿ ವ್ಯವಹಾರಗಳನ್ನು ನಡೆಸುತ್ತಿರುವವರ ಬದುಕನ್ನೂ ಈ ಹೆದ್ದಾರಿ ಕಾಮಗಾರಿ ಕಸಿದುಕೊಳ್ಳುತ್ತಿದೆ.
ಕಾಶಿಬೆಟ್ಟುವಿನಲ್ಲಿ ಹೆದ್ದಾರಿಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದೆ, ಇದೀಗ ಇವರಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿದೆ ನೀರು ಕೆಸರು ನೇರವಾಗಿ ಇವರ ಅಂಗಡಿಗಳಿಗೆ ಫ್ಯಾಕ್ಟರಿ ಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಯಾರಲ್ಲಿ ದೂರು ನೀಡಿದರೂ ಯಾರೂ ಇವರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದೀಗ ಇಲ್ಲಿನ ವ್ಯವಹಾರ ನಡೆಸುವವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿರುವ ಏಕೈಕ ಕೈಗಾರಿಕಾ ವಸಾಹತಾಗಿರುವ ಕಾಶಿಬೆಟ್ಟುವಿನಲ್ಲಿ 11ಮಳಿಗೆಗಳನ್ನು ನಿರ್ಮಿಸಿ ನೀಡಲಾಗಿದೆ. ಇಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನೂ ಒದಗಿಸಲಾಗಿತ್ತು, ಆದರೆ ಇದೀಗ ಇಲ್ಲಿ ರಸ್ತೆ ನೀರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಹೆದ್ದಾರಿ ಕಾಮಗಾರಿಗಾಗಿ ನಾಶಪಡಿಸಲಾಗಿದೆ. ಇಲ್ಲಿ ರಸ್ತೆಯನ್ನು ಎತ್ತರಿಸಲು ಹೊರಟಿರುವ ಅಧಿಕಾರಿಗಳು ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆಮಾಡದೆ ಇರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಸರು ಹಾಗೂ ನೀರು ನೇರವಾಗಿ ಇವರ ಮಳಿಗೆಗಳಿಗೆ ನುಗ್ಗುತ್ತಿದ್ದು ಯಾವುದೇ ಕೆಲಸ ಮಾಡದಂತಗ ಸ್ಥಿತಿ ನಿರ್ಮಾಣ ವಾಗುತ್ತಿದೆ. ಇಲ್ಲಿಗೆ ಇದ್ದ ರಸ್ತೆ ಬಹುತೇಕ ಮುಚ್ಚಿದ ರೀತಿಯಲ್ಲಿದ್ದು ಅಗತ್ಯ ಕಚ್ಚಾವಸ್ತುಗಳನ್ನು ತರಲು ಸಾಧ್ಯವಾಗಿತ್ತಿಲ್ಲ. ಇಲ್ಲಿ ಸಿದ್ದವಾಗುವ ವಸ್ತುಗಳನ್ನು ಹೊರಗೆ ಕೊಂಡೊಯ್ಯಲು ಸಾಧ್ಯವಾಗದೆ ಇಲ್ಲಿ ಉದ್ಯಮಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ರಸ್ತೆ ಸಂಪರ್ಕ ಸಂಪೂರ್ಣ ಹಾಳಾಗಿರುವುದರಿಂದ ಯಾರೂ ವ್ಯವಹಾರಗಳಿಗಾಗಿಯೂ ಇಲ್ಲಿಗೆ ಬರುತ್ತಿಲ್ಲ ಎಂಬುದು ಇಲ್ಲಿನ ಉಧ್ಯಮಿಗಳ ಸಮಸ್ಯೆಯಾಗಿದೆ.
ಈ ಬಗ್ಗೆ ಕೈಗಾರಿಕಾ ವಸಾಹತು ಅಭಿವೃದ್ಧಿಯ ಸಂಚಾಲಕ ಪ್ರಶಾಂತ್ ಲಾಯಿಲ ಹಾಗೂ ಸಮತಿಯವರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿಗಳನ್ನು ನೀಡಿದ್ದಾರೆ. ಇದೀಗ ಯಾವುದೇ ರೀತಿಯ ಸ್ಪಂದನೆ ದೊರಕದ ಹಿನ್ನಲೆಯಲ್ಲಿ ಈ ಜನರು ಪ್ರತಿಭಟನೆಯ ಹಾದಿಯನ್ನು ಹಿಡಿಯಲು ಮುಂದಾಗಿದ್ದಾರೆ. ಇನ್ನಾದರೂ ಅಧಿಕಾರಿಗಳು ಹೆದ್ದಾರಿ ಗುತ್ತಿಗೆದಾರರು ಎಚ್ಚೆತ್ತುಕೊಂಡು ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.
