ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಇದುವರೆಗೂ ಯಾವುದೇ ಕ್ರಮ ವಹಿಸದಿರುವ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮತ್ತು ತೋಟಗಾರಿಕಾ ಸಚಿನ ಮಲ್ಲಿಕಾರ್ಜುನ ಅವರಿಗೆ ಪತ್ರ ಬರೆದು ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಹಲವಾರು ವರ್ಷಗಳಿಂದ ಕಲ್ಪಿಸಲಾಗಿದೆ. ಆದರೆ ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ, ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಪ್ರಸ್ತುತ ವರ್ಷಕ್ಕೆ ಕಲ್ಪಿಸಲು ಬೆಳೆಗಾರರಿಂದ ನಿಗದಿಯಾದ ಬೆಳೆ ವಿಮ ಕಂತನ್ನು ಪಡೆದು ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಕಲ್ಪಿಸಲು ಈಗಾಗಲೇ ಕ್ರಮ ವಹಿಸಬೇಕಾಗಿತ್ತು.
ಆದರೆ
ಈಗಾಗಲೇ ಜೂನ್ ತಿಂಗಳ ಅಂತ್ಯ ಸಮೀಪಿಸುತ್ತಿದ್ದು ಬೆಳೆಗಾರರಿಂದ ನಿಗದಿಯಾದ ಬೆಳೆ ವಿಮೆ ಕಂತನ್ನು ಪಡೆದು ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಕಲ್ಪಿಸಲು ಇದುವರೆಗೂ ಯಾವುದೇ ಕ್ರಮ ಪ್ರಾರಂಭವಾಗಿರುವುದಿಲ್ಲ.
ಅಲ್ಲದೇ ಕಳೆದ ವರ್ಷ ಟೆಂಡರ್ ಪ್ರಕ್ರಿಯೆ ವಿಳಂಭವಾದ್ದರಿಂದ ಬೆಳೆ ವಿಮೆ ಅವಧಿಯನ್ನು 2023 ರ ಆ. 1 ರಿಂದ 2024 ರ ಜು. 31 ರ ವರೆಗೆ ನಿಗದಿಪಡಿಸಲಾಗಿದೆ. ಈ ಹಿಂದೆ ಒಮ್ಮೆ ಬೆಳೆ ವಿಮೆ ಪಡೆದರೆ ಅದು 3 ವರ್ಷದ ಅವಧಿಗೆ ಚಾಲ್ತಿಯಲ್ಲಿರುತ್ತಿತ್ತು ಆದರೆ ಕಳೆದ ವರ್ಷದಿಂದ ಕೇವಲ 1 ವರ್ಷದ ಅವಧಿಗೆ ಮಾತ್ರ ಮಿತಿಗೊಳಿಸಲಾಗಿದೆ. ಸಂಕಷ್ಟದಲ್ಲಿರುವ ಬೆಳೆಗಾರರಿಗೆ ನೆರವಾಗುವ ದೃಷ್ಟಿಯಿಂದ ಈ ಹಿಂದೆ ಇದ್ದಂತೆ ಬೆಳೆ ವಿಮೆ ಅವಧಿಯನ್ನು 3 ವರ್ಷಗಳಿಗೆ ವಿಸ್ತರಿಸಬೇಕು ಹಾಗೂ ಬೆಳೆಗಾರರಿಂದ ನಿಗದಿಯಾದ ಬೆಳೆ ವಿಮೆ ಕಂತನ್ನು ಪಡೆದು ಅವರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಕಲ್ಪಿಸಲು ಈ ಕೂಡಲೇ ಕ್ರಮ ವಹಿಸಬೇಕೆಂದು ನಾಯಕ್ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ