Home ಸ್ಥಳೀಯ ಸಮಾಚಾರ ಶಿಬಾಜೆಯಲ್ಲಿ ಕಾಡಿಗೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ 6ದಿನಗಳ ಬಳಿಕ ಪತ್ತೆ

ಶಿಬಾಜೆಯಲ್ಲಿ ಕಾಡಿಗೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ 6ದಿನಗಳ ಬಳಿಕ ಪತ್ತೆ

277
0

ಬೆಳ್ತಂಗಡಿ: ಕಳೆದ ಮಂಗಳವಾರ ಕಟ್ಟಿಗೆ ತರಲೆಂದು ಮನೆ ಸಮೀಪದ ಗುಡ್ಡೆಗೆ ಹೋಗಿದ್ದ ಶಿಬಾಜೆ ಗ್ರಾಮದ ಐoಗುಡ ನಿವಾಸಿ ವಾಸು ರಾಣ್ಯ(83) ಆರು ದಿನಗಳ ಬಳಿಕ ತಮ್ಮ ಮನೆ ಸೇರಿಕೊಂಡಿದ್ದಾರೆ. ಶಿಬಾಜೆ ಗ್ರಾಮದ ವಾಸು ರಾಣ್ಯ ಎಂಬವರು ಮೇ 21ರ ಬೆಳಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು, ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಮನೆಗೆ ಬರದೇ ಇದ್ದಾಗ, ಸ್ಥಳೀಯರ ಜತೆ ಹುಡುಕಾಟ ನಡೆಸಿದರು. ಸುಮಾರು ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ.

ರವಿವಾರ ಬೆಳಗ್ಗೆ ಮನೆಯವರು ಆಡು ಮೇಯಿಸಲೆಂದು ಮನೆ ಸಮೀಪವಿರುವ ಗುಡ್ಡೆಗೆ ತೆರಳಿದಾಗ ಕೂ…ಕೂ…ಎಂಬ ಶಬ್ದ ಕೇಳಿ ಬಂತು. ಸದ್ದಿನ ಜಾಡು ಹಿಡಿದು ಸ್ಥಳೀಯರು ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದಾಗ ಮನೆಯ ಮೇಲಿನ ಭಾಗದ ಭಂಡಿಹೊಳೆ ಕಾಡಿನ ಸುಮಾರು 2.5 ಕಿ. ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ.
ಬಳಿಕ ಅವರನ್ನು ಕೊಕ್ಕಡ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ವಾಸು ರಾಣ್ಯ ಆರೋಗ್ಯವಾಗಿದ್ದು, ತನ್ನನ್ನು ಯಾರೋ ಬಾ ಬಾ ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಆಹಾರವನ್ನೇನೂ ತಾನು ತೆಗೆದುಕೊಳ್ಳದೆ ಕೇವಲ ನೀರು ಮಾತ್ರ ಕುಡಿಯುತ್ತಿದೆ ಎಂದು ಕನವರಿಕೆಯಂತೆ ಹೇಳುತ್ತಿದ್ದಾರೆ.

ವಾಸು ಅವರನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಶೌರ್ಯ ವಿಪತ್ತು ತಂಡದ ಅವಿನಾಶ್ ಭಿಡೆ, ಶೀನಪ್ಪ, ಗಂಗಾಧರ ಶಿಶಿಲ, ಕುಶಾಲಪ್ಪ ಶಿಶಿಲ, ಪ್ರವೀಣ್ ಪತ್ತಿಮಾರು, ಮತ್ತು ಸ್ಥಳೀಯರಾದ ಗೋವಿಂದ, ಗಣೇಶ್, ಸುರೇಶ, ಪುನೀತ್, ಶರತ್, ಶಶಿಕಾಂತ್, ವಿಶ್ವನಾಥ್, ಕೃಷ್ಣ ನಾಯ್ಕ್ ಮತ್ತು ವಾಸು ರಾಣ್ಯರ ಪುತ್ರರಾದ ಕಮಲಾಕ್ಷ ಮತ್ತು ಸುರೇಶ್ ಮತ್ತು ರಾಣ್ಯ ಕುಟುಂಬಸ್ಥರು ಸಹಕರಿಸಿದರು.

LEAVE A REPLY

Please enter your comment!
Please enter your name here