ಬೆಳ್ತಂಗಡಿ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತನ್ನ ಅಪ್ರಾಪ್ತ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೋಲೀಸ್ ಠಾಣೆಗೆ ದೂರು ದಾಖಲಿಸಿ ಪ್ರಕರಣದಾಖಲಾಗಿರುವಾಗ ದೂರು ನೀಡಿದ ಮಹಿಳೆಯ ಸಾವು ಅನುಮಾನಕ್ಕೆಡೆಮಾಡಿದೆ ಅದರ ಬಗ್ಗೆ ತನಿಖೆ ನಡೆಸಬೇಕು ಎಂದು ದಲಿತ ಹಕ್ಕು ಸಮಿತಿಯ ಬೆಳ್ತಂಗಡಿ ತಾಲೂಕು ಮುಖಂಡರೂ, ರಾಜ್ಯ ಸಮಿತಿ ಸದಸ್ಯೆಯೂ ಆಗಿರುವ ಈಶ್ವರಿ ಪದ್ಮುಂಜ ಅವರು ಒತ್ತಾಯಿಸಿದ್ದಾರೆ.
ಅವರು ಈ ಬಗ್ಗೆ ಸರಕಾರಕ್ಕೆ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಮೂಲಕ ಮನವಿ ಮಾಡಿ ನೀಡಿದ ಬಳಿಕ ಮಾತನಾಡಿದರು. ಮರಣ ಹೊಂದಿದ ಮಹಿಳೆಯ ಮರಣೋತ್ತರ ಪರೀಕ್ಷೆಯನ್ನೂ ಮಾಡದೆ ದಹನ ಮಾಡಿರುವುದು ಇನ್ನಷ್ಟು ಅನುಮಾನಕ್ಕೀಡು ಮಾಡಿದೆ. ಅನಾರೋಗ್ಯ ಎಂದು ಆಸ್ಪತ್ರೆಗೆ ದಾಖಲಾದರೆ ವೈದ್ಯರ ಮೇಲೆ ನಂಬಿಕೆ ಕಳಕೊಳ್ಳುವ ಈ ಘಟನೆಯನ್ನು ಸರಕಾರ ಗಂಬೀರವಾಗಿ ಪರಿಗಣಿಸಬೇಕು ಎಂದು ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಇಲ್ಲವಾದರೆ ರಾಜ್ಯದ ದಲಿತ ಸಮುದಾಯ ಹಾಗೂ ಮಹಿಳೆಯರು ಒಟ್ಟಾಗಿ ನ್ಯಾಯಕ್ಕಾಗಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣರನ್ನು ತಕ್ಷಣ ಬಂದಿಸಲು ಆಗ್ರಹಿಸಿ ಮತ್ತು ಮಹಿಳೆಯರ ಘನತೆ ಎತ್ತಿಹಿಡಿಯಲಿಕ್ಕಾಗಿ ನಡೆಯುವ ಮೇ 30 ರ ಹಾಸನ ಚಲೋ ಹೋರಾಟದಲ್ಲಿ ಬೆಳ್ತಂಗಡಿಯಿಂದ ಸುಮಾರು 55 ಜನ ಭಾಗವಹಿಸುತ್ತಿದ್ದೇವೆ ಎಂದೂ ಅವರು ಹೇಳಿದರು.

