ಉಜಿರೆ: ಇಲ್ಲಿನ ಬಿಲ್ಲವ ಸಂಘ ಹಾಗೂ ಯುವ ವಾಹಿನಿ ಸಂಘಟನೆಯ ನೇತೃತ್ವದಲ್ಲಿ,ಮಾಜಿ ಶಾಸಕರಾದ ಕೆ.ವಸಂತ ಬಂಗೇರರ ನುಡಿ ನಮನ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಪಿ.ಸಿ.ಸಿ.ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ,’ನಾರಾಯಣ ಗುರುಗಳ ಚಿಂತನೆಯನ್ನು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಅನುಷ್ಠಾನ ಗೊಳಿಸಿದ ಕೀರ್ತಿ ಬಂಗೇರರಿಗೆ ಸಲ್ಲುತ್ತದೆ.ಬಂಗೇರರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೊನೆಯುಸಿರು ಇರುವರೆಗೂ ಪ್ರಯತ್ನಿಸುತ್ತಿದ್ದರು. ವಿದ್ಯಾ ಸಂಸ್ಥೆಯನ್ನು ಕಟ್ಟಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ಮೂಲಕ ಬಡ ಮಕ್ಕಳ ಕನಸಿಗೆ ಬಲ ತುಂಬಿದರು. ಕನ್ಯಾಡಿಯ ರಾಮ ಮಂದಿರ ನಿರ್ಮಾಣದಲ್ಲಿ ಬಂಗೇರರ ಕೊಡುಗೆ ಅನನ್ಯವಾದುದೆಂದರು.
ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಎಂ.ಕೆ.ಪ್ರಸಾದ್ ಮಾತನಾಡಿ,’ ಎಲ್ಲಾ ಬಿಲ್ಲವ ಸಂಘಟನೆಗಳ ಕಾರ್ಯಕ್ರಮಗಳು ಬಂಗೇರರ ಮಾರ್ಗದರ್ಶನದಲ್ಲೇ ನಡೆಯುತ್ತಿದ್ದವು. ತಾಲೂಕಿನ ಹೃದಯ ಭಾಗದಲ್ಲಿ ಸಂಘಕ್ಕೆ ಕಟ್ಟಡ ನಿರ್ಮಾಣ ಮಾಡಿ ಅದರಲ್ಲಿ ಬರುತ್ತಿರುವ ಆದಾಯವನ್ನು ಸಮಾಜದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಬೇಕೆನ್ನುವ ಅವರ ಆಶಯ ಶ್ರೇಷ್ಠ ವಾದದ್ದು. ಎಂದರು.’
ಅತಿಥಿಗಳಾಗಿದ್ದ ಸಂಪತ್ ಸುವರ್ಣ ಮಾತನಾಡಿ,’ಬಂಗೇರರು ಕೇವಲ ರಾಜಕಾರಣಿಯಲ್ಲ,ಅವರೊಬ್ಬ ಜನನಾಯಕ ಎಂದರು.ಅವರ ಅಗಲಿಕೆ ನಮ್ಮ ಸಮಾಜದಲ್ಲಿ ನಿರ್ವಾತ ವಾತಾವರಣ ವನ್ನು ಉಂಟುಮಾಡಿದೆ ಎಂದು ಅಭಿಪ್ರಾಯ ಪಟ್ಟರು. ಉಜಿರೆ ಗ್ರಾ.ಪಂ.ನ ಉಪಾಧ್ಯಕ್ಷರಾದ ರವಿಕುಮಾರ್ ಬರಮೇಲು,ಮಾಜಿ ಗ್ರಾ.ಪಂ.ಅಧ್ಯಕ್ಷರುಗಳಾದ ಶ್ರೀಧರ ಪೂಜಾರಿ,ಮಂಜುಳಾ ಉಮೇಶ್,ಗ್ರಾ.ಪಂ.ಸದಸ್ಯರಾದ ಗುರು ಪ್ರಸಾದ್ ಕೋಟ್ಯಾನ್, ಯುವ ಬಿಲ್ಲವ ವೇದಿಕೆಯ ತಾಲ್ಲೂಕು ಉಪಾಧ್ಯಕ್ಷರಾದ ಮನೋಜ್ ಕುಂಜರ್ಪ ಉಪಸ್ಥಿತರಿದ್ದರು.
ಉಜಿರೆ ಬಿಲ್ಲವ ಸಮಿತಿಯ ಅಧ್ಯಕ್ಷರಾದ ಹರೀಶ್ ಬರಮೇಲು ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕರಾದ ಸುರೇಶ್ ಮಾಚಾರ್ ಕಾರ್ಯಕ್ರಮ ನಿರ್ವಹಿಸಿದರು.