ಧರ್ಮಸ್ಥಳ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಟವಾಡುತ್ತಾ ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಮೇ 2ರಂದು ಧರ್ಮಸ್ಥಳದ ಮುಳ್ಳಿಕಾರ್‌ನಲ್ಲಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಪಟ್ಟೋಡಿ ಮನೆ ನಿವಾಸಿ ಜಗದೀಶ್ ಎಂಬವರ ಪುತ್ರ ಪ್ರಣಿತ್ ಕುಮಾರ್ (1ವರ್ಷ 9 ತಿಂಗಳು)ಈ ದುರ್ಘಟನೆಯಲ್ಲಿ ಮೃತಪಟ್ಟ ಮಗು.
ಜಗದೀಶ್ ಅವರ ಪತ್ನಿ ಪ್ರತಿ ದಿನ ತೋಟಕ್ಕೆ ನೀರು ಬಿಡಲೆಂದು ಸಂಗ್ರಹಿಸಿರುವ ಕೆರೆಗೆ ಬಟ್ಟೆ ತೊಳೆಯಲು ಹೋಗುತ್ತಿದ್ದು ಆ ಸಮಯ ಪುತ್ರ ಪ್ರಣಿತ್ ಕುಮಾರ್‌ನನ್ನು ಆಗಾಗ ಕೆರೆಯ ಬಳಿ ಕರೆದುಕೊಂಡು ಹೋಗುತ್ತಿದ್ದರು. ಪ್ರಣಿತ್ ಕೆರೆಯ ಬಳಿ ಹೋಗುವ ಅಭ್ಯಾಸವಾಗಿದ್ದು, ಮೇ 2 ರಂದು ಸಂಜೆ ಮನೆಯವರೆಲ್ಲ ಒಳಗಡೆ ಇದ್ದರು. ಪ್ರಣಿತ್ ಕುಮಾರ್ ಮನೆಯ ಹೊರಗಡೆ ಆಟವಾಡಿಕೊಂಡಿದ್ದ. ನಂತರ ಮನೆಯವರು ಹೊರಗಡೆ ಬಂದು ನೋಡಿದಾಗ ಅಂಗಳದಲ್ಲಿ ಆಟವಾಡುತ್ತಿದ್ದ ಪ್ರಣಿತ್ ಕಂಡು ಬರಲಿಲ್ಲ.
ಮನೆಯವರೆಲ್ಲರೂ ಸೇರಿ ಮನೆಯ ಸುತ್ತಮುತ್ತಲೂ ಹುಡುಕಾಟ ನಡೆಸಿ, ನಂತರ ಮಗು ಕೆರೆಯ ಬಳಿ ಹೋಗಿರಬಹುದು ಎಂದು ಅನುಮಾನಗೊಂಡು ತೋಟದಲ್ಲಿರುವ ಕೆರೆಯ ಬಳಿಗೆ ಬಂದು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಪ್ರಣಿತ್‌ನ ಮೃತದೇಹವು ಕೆರೆಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ