ಬೆಳ್ತಂಗಡಿ: ಕಳೆದ ಏಳು ತಿಂಗಳುಗಳಿಂದ ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆಯುತ್ತಿದ್ದ ಜಟಾಪಟಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ವಿಭಾಗ ಇವರು ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ಬೆಳ್ತಂಗಡಿ ತಾಲೂಕು ಇದರ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ವಿಶೇಷಾಧಿಕಾರಿಯನ್ನು ನೇಮಿಸಿ ಆದೇಶವನ್ನು ಹೊರಡಿಸಿದ್ದಾರೆ.
ಸಂಘದಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಸದಸ್ಯರು ಮತ್ತು ಆಡಳಿತ ಮಂಡಳಿಯ ಕೆಲ ನಿರ್ದೇಶಕರುಗಳಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 70ಕ್ಕೂ ಹೆಚ್ಚು ಸದಸ್ಯರು 2023ರ ನವೆಂಬರ್ 29ರಂದು ಸಂಘದ ಎದುರು ಪ್ರತಿಭಟನೆಯನ್ನು ನಡೆಸಿದ್ದು, ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದ್ದರು. ಸಂಘದ ಸದಸ್ಯರ ಒತ್ತಡಕ್ಕೆ ಮಣಿದ ಅಧ್ಯಕ್ಷ ಉಪಾಧ್ಯಕ್ಷರು ಸೇರಿ ಎಲ್ಲಾ 13 ಮಂದಿ ನಿರ್ದೇಶಕರು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಂಘದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಅವರ ಸಮ್ಮುಖದಲ್ಲಿ ಸಾಮೂಹಿಕ ರಾಜೀನಾಮೆಯನ್ನು ನೀಡಿದ್ದರು.
ಬಳಿಕದ ಬೆಳವಣಿಗೆಯಲ್ಲಿ ಮತ್ತೆ ಉಲ್ಟಾ ಹೊಡೆದ ಅಧ್ಯರು ಮತ್ತು ಕೆಲ ಸದಸ್ಯರು ನಾವು ರಾಜೀನಾಮೆಯನ್ನು ನೀಡಿಲ್ಲ ಎಂಬುದಾಗಿ ಪತ್ರಿಕಾಗೋಷ್ಠಿಯನ್ನು ಕೂಡಾ ನಡೆಸಿದ್ದು, ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿರಲಿಲ್ಲ.
ಮಲೆಬೆಟ್ಟು, ಹಾಲು ಉತ್ಪಾದಕರ ಸಂಘದಲ್ಲಿ ಒಟ್ಟು 120 ಜನ ಸದಸ್ಯರಿದ್ದು, ದಿನಕ್ಕೆ 920 ಲೀಟರ್ ಹಾಲು ಸಂಗ್ರಹಣೆ ಆಗುತ್ತಿದ್ದು, ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಂಘದ ಸದಸ್ಯರ ಕಿತ್ತಾಟದಿಂದ ಡಿಸೆಂಬರ್ 2023ರಿಂದ 2024ನೇ ಮಾ.14ರ ವರೆಗೆ ಆಡಳಿತ ಮಂಡಳಿಯ ಸಭೆಯೇ ನಡೆದಿರುವುದಿಲ್ಲ.
ಸಂಘದ ಕಾರ್ಯದರ್ಶಿಯವರು ತಮ್ಮ ಹುದ್ದೆಗೆ ರಾಜಿನಾಮೆಯನ್ನು ನೀಡಿದ್ದು, ಸಂಘದಲ್ಲಿ ಹಾಲು ಶೇಖರಣೆ ಮತ್ತು ಹಣ ಬಟವಾಡೆಗೆ ಸಮಸ್ಯೆಯಾಗಿದ್ದು, ಒಕ್ಕೂಟದ ಯೋಜನೆಗಳನ್ನು ಸದಸ್ಯರಿಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ.
ಈ ಬಗ್ಗೆ ವಿವರಣೆಯನ್ನು ನೀಡುವಂತೆ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರಿಗೆ ಪತ್ರವನ್ನು ಬರೆದಿದ್ದರೂ ಅವರಿಂದ ಸರಿಯಾದ ಸ್ಪಷ್ಟಿಕರಣ ಬರದಿರುವ ಕಾರಣ ಸಂಘದ ದೈನಂದಿನ ಕಾರ್ಯಚಟುವಟಿಕೆಯನ್ನು ನಡೆಸಲು ಅನುಕೂಲವಾಗುವಂತೆ ಆಡಳಿತ ಮಂಡಳಿಯ ಸ್ಥಾನದಲ್ಲಿ ವಿಶೇಷಧಿಕಾರಿಯನ್ನು ನೇಮಿಸುವಂತೆ ದ.ಕ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕರು ಆದೇಶವನ್ನು ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪುತ್ತೂರು ವಿಭಾಗ ಇವರು ಮಲೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಬೆಳ್ತಂಗಡಿ ತಾಲೂಕು ಇದರ ಆಡಳಿತ ಮಂಡಳಿಯನ್ನು ರದ್ದುಪಡಿಸಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಬೆಳ್ತಂಗಡಿ ಕ್ಯಾಂಪ್ ನ ವಿಸ್ತರಣಾಧಿಕಾರಿ ಯಮುನಾ, ಇವರನ್ನು ವಿಶೇಷಾಧಿಕಾರಿಯಾಗಿ ಸಂಘದ ದೈನಂದಿನ ಕಾರ್ಯಚಟುವಟಿಕೆಯನ್ನು ಸರಿಯಾಗಿ ನಿರ್ವಹಿಸಲು ಹಾಗೂ ಸಂಘದ ಸದಸ್ಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು 3 ತಿಂಗಳ ಅವಧಿಕೆ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.