Home ಸ್ಥಳೀಯ ಸಮಾಚಾರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಭಾರತೀಯ ವೈಜ್ಞಾನಿಕ ಪರಂಪರೆ’ ರಾಷ್ಟ್ರೀಯ ವಿಚಾರ ಸಂಕಿರಣ

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಭಾರತೀಯ ವೈಜ್ಞಾನಿಕ ಪರಂಪರೆ’ ರಾಷ್ಟ್ರೀಯ ವಿಚಾರ ಸಂಕಿರಣ

107
0

ಉಜಿರೆ, ಫೆ. 26: ಉಜಿರೆಯ ಶ್ರೀ ಧ.ಮಂ. ಸ್ವಾಯತ್ತ ಕಾಲೇಜಿನಲ್ಲಿ ಇಂದು (ಫೆ. 26) ‘ಭಾರತೀಯ ವೈಜ್ಞಾನಿಕ ಪರಂಪರೆ’ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಿತು.

ಕಾಲೇಜಿನ ಭೌತಶಾಸ್ತ್ರ, ಸಂಸ್ಕೃತ ಹಾಗೂ ಗಣಿತಶಾಸ್ತ್ರ ವಿಭಾಗಗಳ ವತಿಯಿಂದ, ಐಐಟಿ ಖರಗ್‌ಪುರದ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಇಂಡಿಯನ್ ನಾಲೆಜ್ ಸಿಸ್ಟಮ್ಸ್ ಸಹಯೋಗದಲ್ಲಿ ನವದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್-ಇಂಡಿಯನ್ ನಾಲೇಜ್ ಸಿಸ್ಟಮ್ (ಎಐಸಿಟಿಇ- ಐಕೆಎಸ್) ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಶಿಕ್ಷಕರ ಸಂಘದ ಬೆಂಬಲದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್., ‘ಹಳೆ ಬೇರು ಹೊಸ ಚಿಗುರು’ ಎಂಬಂತೆ ಹೊಸತನದ ಆಲೋಚನೆಗಳು ಹಾಗೂ ಪಾರಂಪರಿಕ ಸಂಶೋಧನೆಗಳು ಬೆರೆತುಕೊಳ್ಳಬೇಕು. ವೈದ್ಯಕೀಯ ಹಾಗೂ ಭೌತಶಾಸ್ತ್ರಗಳಿಗೆ ಸುಶ್ರುತ ಹಾಗೂ ಭಾಸ್ಕರರ ಕೊಡುಗೆಗಳು ಹಾಗೂ ಗಣಿತಶಾಸ್ತ್ರಕ್ಕೆ ಒಳಪಡುವ ಶೂನ್ಯ, ದಶಮಾಂಶ ಪದ್ಧತಿ ಹಾಗೂ ತ್ರಿಕೋನಮಿತಿಗಳಿಗೆ ಆರ್ಯಭಟನ ಕೊಡುಗೆಗಳು ಭಾರತವನ್ನು ಪ್ರಪಂಚಕ್ಕೆ ಮಾದರಿಯನ್ನಾಗಿಸಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ‘ಪೂರ್ಣಮದ ಪೂರ್ಣಮಿದ’ ಮಂತ್ರ ಹಾಗೂ ಹಿಂದೂ ಪುರಾಣದ ದಶಾವತಾರವು ಜೀವ ವಿಕಾಸ ಹಾಗೂ ಪರಿಪೂರ್ಣತೆಯ ಕುರಿತು ತಿಳಿಸುತ್ತದೆ. ಸುಶ್ರುತನ ‘ಸುಶ್ರುತ ಸಂಹಿತ’ದ ಪ್ರಕಾರ ನಿಸರ್ಗದಲ್ಲಿ ಲಭ್ಯವಿರುವ ಪ್ರತಿಯೊಂದು ವನಸ್ಪತಿ (ಸಸ್ಯವರ್ಗ)ಯೂ ಒಂದಲ್ಲ ಒಂದು ಔಷಧೀಯ ಮೌಲ್ಯವನ್ನು ಹೊಂದಿದೆ ಎಂದು ಪರಾಶರ ತನ್ನ ‘ಪರಾಶರ ಸಂಹಿತ’ದಲ್ಲಿ ವಿವಿಧ ಬಗೆಯ ಸಸ್ಯವರ್ಗಗಳ ಮಹತ್ವವನ್ನು ವಿವರಿಸಿದ್ದಾನೆ. ಈ ರೀತಿ ಭಾರತೀಯ ವೈಜ್ಞಾನಿಕ ಪರಂಪರೆಯು ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಮುಂಬೈನ ಆನಂದ ಕೆ. ಘುರ್ಯೆ ಹಾಗೂ ಖರಗ್‌ಪುರ ಐಐಟಿಯ ಪ್ರಾಧ್ಯಾಪಕ ಡಾ. ಮಹೇಶ್ ಕೆ., ಕಾರ್ಯಕ್ರಮ ಸಂಚಾಲಕ, ಗಣಿತ ವಿಭಾಗ ಮುಖ್ಯಸ್ಥ ಗಣೇಶ್ ನಾಯಕ್ ಬಿ. ಉಪಸ್ಥಿತರಿದ್ದರು.

‘ರಿಲವೆನ್ಸ್ ಆಫ್ ಸೈಂಟಿಫಿಕ್ ಹೆರಿಟೇಜ್ ಆ್ಯಂಡ್ ಅಪ್ಲಿಕೇಶನ್ಸ್ ಇನ್ ಭಾರತ್’, ‘ರಾಶನೇಲ್ಸ್ ಆ್ಯಂಡ್ ಡೆಮಾನ್ಸ್ಟ್ರೇಶನ್ ಇನ್ ಇಂಡಿಯನ್ ಮ್ಯಾಥೆಮ್ಯಾಟಿಕ್ಸ್ ಆ್ಯಂಡ್ ಆಸ್ಟ್ರೋನಮಿ’ ಮತ್ತು ‘ಕಾನ್ಶಿಯಸ್ ಬಯೋಮಿಮಿಕ್ರಿ ಇನ್ ಏನ್ಶಿಯಂಟ್ ವಿಸ್ಡಮ್’ ಕುರಿತು ವಿಚಾರ ಮಂಡನೆ ನಡೆಯಿತು. ದೇಶದ ವಿವಿಧೆಡೆಯಿಂದ ಸುಮಾರು 200ಕ್ಕೂ ಅಧಿಕ ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮ ಸಂಚಾಲಕರಾದ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಎಸ್.ಎನ್. ಕಾಕತ್ಕರ್ ಸ್ವಾಗತಿಸಿ, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ಶ್ರೀಧರ್ ಭಟ್ ವಂದಿಸಿದರು. ವಿದ್ಯಾರ್ಥಿ ಪರೀಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here