Home ಅಂಕಣಗಳು ಮಂಗಳೂರು ಲೋಕಸಭಾ ಕ್ಷೇತ್ರದ ಇತಿಹಾಸ, ಒಂದು ಅವಲೋಕನ

ಮಂಗಳೂರು ಲೋಕಸಭಾ ಕ್ಷೇತ್ರದ ಇತಿಹಾಸ, ಒಂದು ಅವಲೋಕನ

0

MPs from Mangalore, Mangalore’s first MP

ಮತ್ತೊಂದು ಲೋಕಸಬಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಸಿದ್ದವಾಗುತ್ತಿದೆ. 1952 ರಲ್ಲಿ ಜಿಲ್ಲೆ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದಾಲೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು ಅಂದು ಕಾಸರಗೋಡನ್ನು ತನ್ನ ವ್ಯಾಪ್ತಿಗೆ ಒಳಗೊಂಡಿತ್ತು. ಬಳಿಕ ಹಲವು ಬದಲಾವಣೆಗಳನ್ನು ಕಂಡು ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಂಡಿರುವ ಲೋಕಸಭಾ ಕ್ಷೇತ್ರವಾಗಿ ರೂಪಗೊಂಡಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಕ್ಷೇತ್ರ ಬಳಿಕ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲಾಗಿ ಪರಿವರ್ತನೆಗೊಂಡಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಈ ಕ್ಷೇತ್ರದಲ್ಲಿ ಈ ವರೆಗೆ ನಡೆದಿರುವ ಚುನಾವಣೆಗಳಲ್ಲಿ ಸಮ ಬಲದ ಹೋರಾಟ ನಡೆಸಿದೆ. ಕ್ಷೆತ್ರದಲ್ಲಿ ಕಾಂಗ್ರೆಸ್ ಅಭ್ಯಥಿಗಳು 9 ಬಾರಿ ಗೆಲುವನ್ನು ಪಡೆದುಕೊಂಡಿದೆ. ಬಿಜೆಪಿ ಕ್ಷೇತ್ರದಲ್ಲಿ ಎಂಟು ಬಾರಿ ಗೆಲುವನ್ನು ಪಡೆದುಕೊಂಡಿದೆ, ಅದರಲ್ಲಿಯೂ ಕಾಂಗ್ರೆಸ್ ನಿಂದ ಜನಾರ್ದನ ಪೂಜಾರಿ ಅವರು ಸತತ ನಾಲ್ಕು ಗೆಲುವುಗಳನ್ನು ಕಂಡರೆ ಬಿಜೆಪಿಯಿಂದ ವಿ.ಧನಂಜಯ ಕುಮಾರ್ ಅವರೂ ಸತತ ನಾಲ್ಕು ಗೆಲುವುಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಈಗಿನ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಸತತ ಮೂರು ಗೆಲುವುಗಳನ್ನು ದಾಖಲಿಸಿದ್ದು ಇದೀಗ ಹಿರಿಯರಿಬ್ಬರ ಸಾಲಿಗೆ ಸೇರುವ ಸಿದ್ದತೆಯಲ್ಲಿದ್ದಾರೆ. ಕಳೆದ ಮೂರು ದಶಕಗಳಿಂದ ಕ್ಷೇತ್ರದಲ್ಲಿ ಬಿಜೆಪಿ ನಿರಂತರವಾಗಿ ಗೆಲುವನ್ನು ಪಡೆಯುತ್ತಾ ಬಂದಿದೆ. ಇದೀಗ ಮತ್ತೊಮ್ಮೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿಗೆ ವೇದಿಕೆ ಸಿದ್ದವಾಗಿದೆ.

ಕಾಂಗ್ರೆಸ್ ಭದ್ರಕೋಟೆ ಮಂಗಳೂರು
1952 ರ ಮೊದಲ ಲೋಕಸಬಾ ಚುನಾವಣೆಯಲ್ಲಿ ಮದ್ರಾಸ್ ಪ್ರಂತ್ಯದ ಬಾಗವಾಗಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕಾಸರಗೋಡು ಜಿಲ್ಲೆಯನ್ನೂ ತನ್ನ ವ್ಯಾಪ್ತಿಯಲ್ಲಿ ಒಳಗೊಂಡಿತ್ತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದ ಬಿ ಶಿವರಾವ್ ಅವರು ಗೆಲುವನ್ನು ಪಡೆದು ಮೊದಲ ಸಂಸದರಾದರು. ಇವರ ವಿರುದ್ದ ಕೆ ರಾಮಕೃಷ್ಣ ಕಾರಂತರು ಕಿಸಾನ್ ಮಜ್ದೂರ್ ಸಭಾ ಪಕ್ಷದಿಂದ ಸ್ಪರ್ಧಿಸಿದ್ದರು. 1957ರ ಚುನಾವಣೆಯ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆ ಮೈಸೂರು ರಾಜ್ಯದ ಭಾಗವಾಗಿತ್ತು. ಕೊಡಗನ್ನೂ ಒಳಗೊಂಡ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತ್ತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ರಾಮಚಂದ್ರ ಆಚಾರ್ ಅವರು ಸಂಸದರಾಗಿ ಆಯ್ಕೆಯಾದರು. ಇವರ ವಿರುದ್ದ ಸಿಪಿಐ ಅಭ್ಯರ್ಥಿ ಕೃಷ್ಣ ಶೆಟ್ಟಿ ಸ್ಪರ್ಧಿಸಿದ್ದರು. 1962 ರಲ್ಲಿ ನಡೆದ ಚುನವಣೆಯಲ್ಲಿ ಎ. ಶಂಕರ ಆಳ್ವ ಅವರು ಸಿಪಿಐ ಅಭ್ಯರ್ಥಿಯಾಗಿದ್ದ ಬಿ.ವಿ ಕಕ್ಕಿಲ್ಲಾಯ ವಿರುದ್ದ ಗೆಲುವನ್ನು ಕಂಡರೆ, 1967 ರಲ್ಲಿ ಸಿ.ಎಂ ಪೂಣಚ್ಚ ಅವರು ಕಾಂಗ್ರೆಸ್ ಪಕ್ಷದಿಂದ ಮಂಗಳೂರು ಕ್ಷೇತ್ರದ ಸಂಸದರಾದರು. 1971 ರ ವೇಳೆಗೆ ಕಾಂಗ್ರೆಸ್ ಪಕ್ಷ ಇಬ್ಬಾಗವಾಗಿತ್ತು ಕೆ.ಕೆ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸಂಸ್ಥಾ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಸಿ.ಎಂ ಪುಣಚ್ಚ ಅವರನ್ನು ಸೋಲಿಸಿ ಸಂಸದರಾದರು.

ನಾಲ್ಕು ಬಾರಿ ಸಂಸದರಾದ ಜನಾರ್ದನ ಪೂಜಾರಿ:

1977 ರಿಂದ 1991 ರ ವರೆಗಿನ ಒಂದುವರೆ ದಶಕದ ಕಾಲ ಮಂಗಳೂರು ಲೋಕಸಬಾ ಕ್ಷೇತ್ರ ಸಂಪೂರ್ಣವಾಗಿ ಜಾನರ್ದನ ಪೂಜಾರಿ ಅವರ ಹಿಡಿತದಲ್ಲಿತ್ತು. ಕಾಂಗ್ರೆಸ್ ಪಕ್ಷದಿಂದ 1977 ರಲ್ಲಿ ಮೊದಲ ಬಾರಿಗೆ ಲೋಕಸಬಾ ಕಣಕ್ಕೆ ಇಳಿದ ಅವರು 1989 ರ ಚುನಾವಣೆಯ ವರೆಗೂ ಸೋಲಿಲ್ಲದ ಸರದಾರನಾಗಿಯೇ ಮುಂದುವರಿದರು. 1977, 1980, 1984, 1989 ಹೀಗೆ ನಾಲ್ಕು ಚುನಾವಣೆಗಳಲ್ಲಿ ಅವರು ಗೆಲುವನ್ನು ಪಡೆದುಕೊಂಡರು.
1983 ರ ವಿಧಾನಸಬಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾಂಗ್ರೆಸ್ ಅನ್ನು ಸೋಲಿಸಿ ದೊಡ್ಡ ಮಟ್ಟದ ಗೆಲುವನ್ನು ಪಡೆದಿದ್ದರೂ ಅದು ಲೋಕಸಭಾ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರಿರಲಿಲ್ಲ. 1984 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು ಪಡೆದಿತ್ತು, 1989 ರ ಚುನಾವಣೆಯಲ್ಲಿ ದೇಶದಲ್ಲಿ ರಾಜಕೀಯ ಬದಲಾವಣೆಗಳಾಗಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದರೂ ಮಂಗಳೂರು ಕ್ಷೇತ್ರ ಜನಾರ್ದನ ಪೂಜಾರಿಯವರ ಕೈ ಬಲಪಡಿಸಿತ್ತು.
ಪೂಜಾರಿ ಅವರು ಕೇಂದ್ರ ಸರಕಾರದಲ್ಲಿ ಸಚಿವರಾಗಿ ಸಾಲಮೇಳದಂತಹ ಹಲವಾರು ಸಮಾಜಮುಖಿ ಕರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಕರಾವಳಿಯ ಅತ್ಯಂತ ಜಪ್ರಿಯ ನಾಯಕರಾಗಿ ರೂಪಗೊಂಡಿದ್ದರು.

ದಕ್ಷಿಣ ಭಾರದಲ್ಲಿ ಬಿಜೆಪಿಯ ಹೆಬ್ಬಾಗಿಲು ತೆರೆದ ಧನಂಜಯ ಕುಮಾರ್


1983ರಲ್ಲಿ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶಿಸಿದ ಬಿಜೆಪಿ ಹಂತಹಂತವಾಗಿ ಬೆಳವಣಿಗೆಯನ್ನು ದಾಖಲಿಸುತ್ತಾ ಬಂದಿತ್ತು. ಅಯೊಧ್ಯಾ ರಥ ಯಾತ್ರೆಯ ಬಳಿಕ 1991 ರಲ್ಲಿ ನಡೆದ ಲೋಕಸಬಾ ಚುನಾವಣೆಯಲ್ಲಿ ಎಲ್ಲವೂ ತಲೆಕೆಳಗಾಯಿತು. ಬಿಜೆಪಿ ಮಂಗಳೂರು ಕ್ಷೇತ್ರವನ್ನು ಗೆದ್ದುಕೊಳ್ಳುವ ಮೂಲಕ ದಕ್ಷಿಣ ಬಾರತಕ್ಕೂ ಪ್ರವೇಶಿಸಿತ್ತು. ವೇಣೂರಿನ ಧನಂಜಯ ಕುಮಾರ್ ಅವರು ದಕ್ಷಿಣ ಭಾರತಕ್ಕೆ ಹೆಬ್ಬಾಗಿಲನ್ನು ತೆರದುಕೊಟ್ಟರು. ಜನಾರ್ಧನ ಪೂಜಾರಿ ಅವರನ್ನು ಸೋಲಿಸಿ ಧನಂಜಯ ಕುಮಾರ್ ಅವರು ಸಂಸದರಾದರು. ಜಾತಿ ಸಮೀಕರಣ ಸೇರಿದಂತೆ ಯಾವುದೂ ಕಾಂಗ್ರೆಸ್ ನೆರವಿಗೆ ಬರಲಿಲ್ಲ. ಅಲ್ಲಿಂದ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಮಂಗಳೂರು ಕ್ಷೇತ್ರವನ್ನು ಮತ್ತೆ ಗೆಲ್ಲಲಾಗಲಿಲ್ಲ ಎಂಬುದು ಇತಿಹಾಸ. 1991, 1996,1998, 1999 ರಲ್ಲಿ ಧನಂಜಯ ಕುಮಾರ್ ಅವರೇ ನಿರಂತರವಾಗಿ ಜನಾರ್ದನ ಪೂಜಾರಿ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು. ಕೇಂದ್ರದ ಸರಕಾರದಲ್ಲಿ ವಿವಿಧ ಮಹತ್ವದ ಖಾತೆಗಳನ್ನು ನಿರ್ವಹಿಸಿದರು. ನಾಲ್ಕು ಬಾರಿ ಸಂಸದರಾದ ಧನಂಜಯ ಕುಮಾರ್ ಅವರನ್ನು ಬದಲಿಸಿ 2004 ರಲ್ಲಿ ಬಿಜೆಪಿ ಡಿ.ವಿ ಸದಾನಂದ ಗೌಡ ಅವರಿಗೆ ಅವಕಾಶ ಒದಗಿಸಿತ್ತು. ಕಾಂಗ್ರೆಸ್ ಪಕ್ಷದಲ್ಲಿಯೂ ಹಲವು ತಿಕ್ಕಾಟಗಳ ಬಳಿಕ ವೀರಪ್ಪ ಮೈಲಿ ಅವರಿಗೆ ಅವಕಾಶ ಒದಗಿಸಲಾಯಿತು. ಅತ್ಯಂತ ಮಹತ್ವದ್ದಾಗಿದ್ದ ಈ ಚುನಾವಣೆಯಲ್ಲಿ ಜನತಾದಳದ ಎ.ಕೆ ಸುಬ್ಬಯ್ಯ ಅವರು ಇವರಿಗೆ ಪ್ರಬಲ ಸ್ಪರ್ಧೆ ನೀಡಿದರು. ಅಂತಿಮವಾಗಿ ಸದಾನಂದ ಗೌಡ ಅವರು 33,415 ಮತಗಳ ಅಂತರದಿಂದ ಗೆದ್ದು ಕ್ಷೇತ್ರವನ್ನು ಉಳಿಸಿಕೊಂಡರು.

ಹ್ಯಾಟ್ರಿಕ್ ಸಾಧಿಸಿದ ನಳಿನ್ ಕುಮಾರ್ ಕಟೀಲು
2009ರಲ್ಲಿ ಮತ್ತೊಂದು ಮಹತ್ವದ ಚುನಾವಣೆ ನಡೆಯಿತು ಈ ವೇಳೆಗೆ ಮಂಗಳೂರು ಲೋಕಸಬಾ ಕ್ಷೇತ್ರ ಮತ್ತೊಮ್ಮೆ ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಎಂಟು ವಿದಾನಸಬಾ ಕ್ಷೇತ್ರಗಳನ್ನೂ ಒಳಗೊಂಡು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಾಗಿ ಮಾರ್ಪಾಡು ಹೊಂದಿತ್ತು. ಹೊಸ ಕ್ಷೇತ್ರದಲ್ಲಿ ಬಿಜೆಪಿ ಸದಾನಂದ ಗೌಡರ ಬದಲಿಗೆ ಹೊಸ ಮುಖ ನಳಿನ್ ಕುಮಾರ್ ಕಟೀಲು ಎಂಬ ಸಾಮಾನ್ಯ ಕರ‍್ಯಕರ್ತನಿಗೆ ಟಿಕೇಟು ನೀಡಿ ಅಚ್ಚರಿ ಮೂಡಿಸಿತ್ತು. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದ ವೀರಪ್ಪ ಮೈಲಿ ಅವರನ್ನು ಬದಲಿಸಿ ಹಿಂದೆ ಸಂಸದರಾಗಿದ್ದ ಜಾನಾರ್ದನ ಪೂಜಾರಿ ಅವರಿಗೆ ಅವಕಾಶ ನೀಡಿತ್ತು. ಉರಿಮಜಲು ರಾಮ ಭಟ್ ಅಂತಹ ಹಿರಿಯ ನಾಯಕರು ಪಕ್ಷೇತರರಾಗಿ ಸ್ಪರ್ಧಿಸಿದ್ದರೂ ಸಮಬಲದ ಹೋರಾಟದಲ್ಲಿ ಮತ್ತೆ ಬಿಜೆಪಿ ಗೆಲುವನ್ನು ಪಡೆದುಕೊಂಡಿತ್ತು. ಜನಾರ್ದನ ಪೂಜಾರಿ ಅವರು ಮತ್ತೊಮ್ಮೆ ಸೋತರು. ನಳಿನ್ ಕುಮಾರ್ ಕಟೀಲು ಅವರಿಗೆ 4,99,385 ಮತಗಳು ದೊರೆತರೆ ಜನಾರ್ದನ ಪೂಜಾರಿ ಅವರಿಗೆ ಕೇವಲ 4,58,965 ಮತಗಳು ಮಾತ್ರ ಲಭಿಸಿದವು. 2014 ರ ಚುನಾವಣೆಯಲ್ಲಿ ನಳಿನ್ ಕುಮಾರ್ ಅವರು ಜನಾರ್ದನ ಪೂಜಾರಿ ಅವರನ್ನು 1,43,709 ಮತಗಳ ಅಂತರದಿಂದ ಸೋಲಿಸುವ ಮೂಲಕ ದಾಖಲೆ ಬರೆದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಧಿ ಮಿಥುನ್ ರೈ ನಳಿನ್ ಕುಮಾರ್ ಕಟೀಲು ಅವರಿಗೆ ಯಾವುದೇ ರೀತಿಯ ಸ್ಪರ್ಧೆ ನಿಡುವಲ್ಲಿ ವಿಫಲರಾದರು. ನಳಿನ್ ಕುಮಾರ್ ಅವರು 2,74,664 ಮತಗಳ ಅಂತರದಿಂದ ಹ್ಯಾಟ್ರಿಕ್ ಸಾಧಿಸಿದರು.
ಹೊರನೊಟಕ್ಕೆ ಬಿಜೆಪಿ ಹಿಂದೆಂದಿಗಿಂತಲೂ ಜಿಲ್ಲೆಯಲ್ಲಿ ಶಕ್ತವಾಗಿದೆ. ಎಂಟರಲ್ಲಿ ಏಳು ಮಂದಿ ಶಾಸಕರೂ ಬಿಜೆಪಿಯವರೇ ಆಗಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಸರಕಾರವನ್ನು ಹೊಂದಿದ್ದರೂ ಜಿಲ್ಲೆಯಲ್ಲಿ ದುರ್ಬಲವಾಗಿ ಕಾಣಿಸುತ್ತಿದೆ. ಆದರೆ ಚುನಾವಣೆಯಲ್ಲಿ ಒಂದು ಸಣ್ಣ ಬದಲಾವಣೆಯಾದರೂ ಅದು ಪಲಿತಾಂಶದಮೇಲೆ ಪರಿಣಾಮ ಬೀರಲಿದೆ. ಎರಡೂ ಪಕ್ಷಗಳಿಗೆ ಚುನಾವಣೆ ಮಹತ್ವದ್ದಾಗಿದೆ. ಈ ಬಾರಿ ಜನರ ಮನಸ್ಸು ಎತ್ತ ವಾಲಲಿದೆ ಎಂದು ಕಾದು ನೋಡಬೇಕಾದ ವಿಚಾರವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version