Home ರಾಜಕೀಯ ಸಮಾಚಾರ ರಾಜ್ಯ ಸಭಾ ಚುನಾವಣೆ ಇದೀಗ ಜೆಡಿಎಸ್ ಬಿಜೆಪಿಯಲ್ಲಿ ಆತಂಕ

ರಾಜ್ಯ ಸಭಾ ಚುನಾವಣೆ ಇದೀಗ ಜೆಡಿಎಸ್ ಬಿಜೆಪಿಯಲ್ಲಿ ಆತಂಕ

0

Rajya Sabha election is now a worry in JDS BJP

ಬೆಂಗಳೂರು: ಕಾಂಗ್ರೆಸ್ ಶಾಸಕರುಗಳನ್ನು ಸೆಳೆದುಕೊಂಡು ಅಡ್ಡಮತದಾನ ಮಾಡಿಸಿ ಗೆಲ್ಲಬಹುದು ಎಂದು ರಾಜ್ಯಸಭಾ ಚುನಾವಣೆಯಲ್ಲಿ ಐದನೇ ಅಭ್ಯರ್ಥಿ ಯನ್ನು ಕಣಕ್ಕೆ‌ಇಳಿಸಿದ ಬಿಜೆಪಿ ಜನತಾದಳ ಮೈತ್ರಿಗೆ ಇದೀಗ ಆತಂಕ‌ ಎದುರಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗೆ ಅಗತ್ಯಕ್ಕಿಂತ ಎರಡು ಹೆಚ್ಚುವರಿ ಮತ ಹಾಕಿಕೊಳ್ಳಬೇಕು ಎಂ‌ಬ ನಿರ್ಧಾರಕ್ಕೆ ಬಿಜೆಪಿ ಬಂದಿದ್ದು ಜತಾದಳದದ ಅಭ್ಯರ್ಥಿ ಗೆಲ್ಲುವ ಅವಕಾಶಗಳೂ ಕ್ಷೀಣಿಸುವಂತೆ ಮಾಡಿದೆ. ಇದು ಮೈತ್ರಿ ಪಕ್ಷ ಜೆಡಿಎಸ್‌ನಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಬಿಜೆಪಿಯ ಹೆಚ್ಚುವರಿ ಮತಗಳು ಹಾಗೂ ಕಾಂಗ್ರೆಸ್ ಶಾಸಕರ ಅಡ್ಡ ಮತದಾನ ಮಾಡಿಸುವ ಮೂಲಕ ಜೆಡಿಎಸ್ ನಾಯಕರು ಗೆಲುವಿನ ಆಸೆ ಹೊಂದಿದ್ದರು. ಆದರೆ ಈಗ ಬಿಜೆಪಿಯ ನಿರ್ಧಾರವೇ ಜೆಡಿಎಸ್ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗದಂತಾಗಿದೆ. ಒಬ್ಬ ಅಭ್ಯರ್ಥಿ ಗೆಲ್ಲುವುದಕ್ಕೆ 45 ಮೊದಲ ಪ್ರಾಶಸ್ತ್ರ ಮತಗಳು ಬೇಕಾಗುತ್ತದೆ.

ಬಿಜೆಪಿ ತನ್ನ ಅಭ್ಯರ್ಥಿಗೆ ಹೆಚ್ಚುವರಿಯಾಗಿ 2 ಮತಗಳನ್ನು ಹಾಕಿಕೊಳ್ಳಲು ನಿರ್ಧರಿಸಿದೆ. ಬಿಜೆಪಿಯಿಂದ 21 ಮತಗಳನ್ನು ಜೆಡಿಎಸ್ ನಿರೀಕ್ಷೆ ಮಾಡಿತ್ತು. ಆದರೆ ಈಗ ಕೇವಲ 19 ಮತಗಳು ಮಾತ್ರ ಸಿಗುತ್ತಿವೆ. ಈಗ ಯಾವುದಾದರೂ ರೀತಿಯಲ್ಲಿ ಸ್ಪರ್ಧೆಯಲ್ಲಿ ಇರಬೇಕಾದರೆ ಜೆಡಿಎಸ್‌ಗೆ ಹೊರಗಿನಿಂದ 7 ಮತಗಳ ಅಗತ್ಯತೆ ಇದೆ. ಪಕ್ಷೇತರರು ಹಾಗೂ ಕಾಂಗ್ರೆಸ್‌ನಿಂದ ಶಾಸಕರನ್ನು ಸೆಳೆಯಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರು. ಆದರೆ ಕುಮಾರಸ್ವಾಮಿ ಮನವಿಗೆ ಪೂರಕ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ. ಇಬ್ಬರು ಪಕ್ಷೇತರರು ಹಾಗೂ ಸರ್ವೋದಯ ಕರ್ನಾಟಕ ಪಕ್ಷದ ಶಾಸಕರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಕೆಆರ್‌ಪಿಪಿಯ ಜನಾರ್ದನ ರೆಡ್ಡಿ ಮತವನ್ನು ಬಿಜೆಪಿ ಲೆಕ್ಕ ಹಾಕಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾ‌ರ್ ಅವರು ರೆಡ್ಡಿ ಜತೆಗೆ ಮಾತುಕತೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಪ್ರಯತ್ನ ಮಾಡಿದ್ದಾರೆ. ಕ್ಷೇತ್ರಕ್ಕೆ ಮುಂದಿನ ನಾಲ್ಕು ವರ್ಷ ಅನುದಾನದ ಭರವಸೆಯೂ ಸಿಕ್ಕಿದೆ ಎಂದು ತಿಳಿದುಬಂದಿದೆ. ಇದರಿಂದ ರೆಡ್ಡಿ ನಡೆ ಕುತೂಹಲ ಮೂಡಿಸಿದೆ.

ಬಿಜೆಪಿ ಮೊದಲು ತನ್ನ ಅಭ್ಯರ್ಥಿಗೆ 45 ಮತಗಳನ್ನೇ ಹಾಕಿಕೊಳ್ಳುವ ನಿರ್ಧಾರ ಮಾಡಿತ್ತು. ಆದರೆ ಈಗ ಬಿಜೆಪಿಗೆ ಅಡ್ಡ ಮತದಾನದ ಭಯ ಕಾಡಲಾರಂಭಿಸಿದೆ. ಯಾರಾದರೂ ಒಬ್ಬ ಸದಸ್ಯ ಅಡ್ಡಮತದಾನ‌ ಮಾಡಿದರೆ ಎಲ್ಲಿ ತಮ್ಮ ಅಭ್ಯರ್ಥಿಗೆ ಸೋಲಾಗಬಹುದು ಎಂಬ ಆತಂಕ ಅವರದ್ದಾಗಿದ್ದು ಆದ್ದರಿಂದ ಪಕ್ಷದ ಅಭ್ಯರ್ಥಿಗೆ 47 ಮತಗಳನ್ನು ಹಂಚಿಕೆ ಮಾಡಲು ಪಕ್ಷ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ಈ ನಿರ್ಧಾರ ಮಿತ್ರಪಕ್ಷ ಜನತಾದಾಳಕ್ಕೆ ಇದ್ದ ಎಲ್ಲ ಆಸೆಗಳನ್ನು ಕಮರಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮೂಡಿಸುವ ಪ್ರಯತ್ನದೊಂದಿಗೆ ಐದನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ ಮೈತ್ರಿ ಕೂಟಕ್ಕೆ ಇದೀಗ ತಮ್ಮ ಮತಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿ ಮಾರ್ಪಟ್ಟಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version