ಬೆಳ್ತಂಗಡಿ: ವೇಣೂರು ಭಗವಾನ್ ಶ್ರೀ ಬಾಹಬಲಿಯ ಮಹಾಮಜ್ಜನಕ್ಕೆ ಸಿದ್ದತೆಗಳು ಭರದಿಂದ ನಡೆಯುತ್ತಿದೆ. ಫೆ. 14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವೇಣೂರಿಗೆ ಭೇಟಿ ಮಾಡಿ ಅಟ್ಟಳಿಗೆ ಹಾಗೂ ಇತರ ಕಾಮಗಾರಿ ವೀಕ್ಷಿಸಿದರು.
ಬಳಿಕ ಮಾತನಾಡಿದ ಡಾ| ಹೆಗ್ಗಡೆಯವರು
ಸರಕಾರವು ಮೂಲ ಸೌಕರ್ಯಗಳಿಗೆ ಅನುದಾನ ಒದಗಿಸಿರುವುದಕ್ಕೆ ವೈಯಕ್ತಿಕ ಧನ್ಯವಾದ ತಿಳಿಸುತ್ತೇನೆ. ಕ್ಷೇತ್ರದ ಮಸ್ತಕಾಭಿಷೇಕದ ಯಶಸ್ಸಿಗೆ ಧರ್ಮಸ್ಥಳ ಐಟಿಐ ಸಂಸ್ಥೆಯ ವಿದ್ಯಾರ್ಥಿಗಳ ಜತೆಗೆ ಶೌರ್ಯ ತಂಡವನ್ನು ಒದಗಿಸುತ್ತೇವೆ. ಒಗ್ಗಟ್ಟಿಗೆ ಉತ್ತಮ ಫಲವಿದೆ. ನಿಮ್ಮೆಲ್ಲರ ಶ್ರಮ, ಉತ್ಸಾಹದಿಂದ ಈ ಐತಿಹಾಸಿಕ ಸಮಾರಂಭ ಯಶಸ್ವಿಯಾಗಲಿದೆ ಎಂದು ಹಾರೈಸಿದರು. ಈಗಾಗಲೇ ರಚನೆಯಾದ ಸಮಿತಿಗಳಲ್ಲಿ ಯುವಕರು ಉಲ್ಲಾಸದಿಂದ ಭಾಗವಹಿಸುವುದು ಸಂತಸದ ವಿಷಯ ಎಂದು ಶ್ಲಾಘಿಸಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಸ್ವಾಗತಿಸಿ, ಸಮಿತಿ ವತಿಯಿಂದ ನಡೆದ ಕೆಲಸಗಳ ಬಗ್ಗೆ ವಿವರಣೆ ನೀಡಿದರು. ಸರಕಾರದಿಂದ ವೇಣೂರಿನ ಮೂಲ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ಬಂದ ಅನುದಾನ ಹಾಗೂ ಆಗಲಿರುವ ಕಾಮಗಾರಿಗಳ ವಿವರವಿತ್ತರು. ಭಕ್ತರ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಿದ ಕಲಶಗಳ ಮಾಹಿತಿ ನೀಡಿದರು.
ಮಹಾ ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ, ಪ್ರಮುಖರಾದ ಡಾ| ಶಾಂತಿಪ್ರಸಾದ್, ವಿಕಾಸ್ ಜೈನ್ ಪಡ್ಯಾರಬೆಟ್ಟು, ಶಿವಪ್ರಸಾದ್ ಅಜಿಲ, ಸನತ್ ಕುಮಾರ್‌ಜೈನ್, ಪ್ರಮೋದ್ ಜೈನ್ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.