ಬೆಳ್ತಂಗಡಿ; ಪುದುವೆಟ್ಟು ಗ್ರಾಮಪಂಚಾಯತಿನ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಗ್ರಾಮಪಂಚಾಯತಿ ಅಧ್ಯಕ್ಷರ ಸರ್ವಾಧಿಕಾರಿ ನೀತಿಯನ್ನು ವಿರೋಧಿಸಿ ಗ್ರಾಮಸಭೆಯಲ್ಲಿಯೇ ಗ್ರಾಮಪಂಚಾಯತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಘಟನೆ ಬುಧವಾರ ನಡೆದಿದೆ.
ಪುದುವೆಟ್ಟು ಗ್ರಾಮಪಂಚಾಯತು ಸದಸ್ಯ ರಾಮೇಂದ್ರ ಎಂಬವರೇ ಅಧ್ಯಕ್ಷರ ನೀತಿಯನ್ನು ವಿರೋಧಿಸಿ ರಾಜೀನಾಮೆ ನೀಡಿದ ಗ್ರಾಮಪಂಚಾಯತು ಸದಸ್ಯರಾಗಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಏನಿದೆ;
ಪುದುವೆಟ್ಟು ಗ್ರಾಮಪಂಚಾಯತು ಸದಸ್ಯ ರಾಮೇಂದ್ರನ್ ಅವರು ರಾಜೀನಾಮೆ ಸಲ್ಲಿಸಿದ್ದು ರಾಜೀನಾಮೆ ಪತ್ರದಲ್ಲಿ “ಕಳೆದ ಆರು ತಿಂಗಳುಗಳಿಂದ ನನ್ನ ವಾರ್ಡಿನ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಸಾಮಾನ್ಯ ಸಭೆಗಳಲ್ಲಿ ಸೇರಿದಂತೆ ಇತರ ವಿಚಾರಗಳಲ್ಲಿ ಗ್ರಾಮ ಪಂಚಾಯತು ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.ಫೆ.5ರಂದು ನಡೆದ ಗ್ರಾಮಪಂಚಾಯತು ಸಾಮಾನ್ಯ ಸಭೆಯಲ್ಲಿ ನನ್ನ ವಾರ್ಡಿನ ಸಮಸ್ಯೆಯ ಬಗ್ಗೆ ಸಭೆಯ ಮುಂದಿಟ್ಟಾಗ ಅಧ್ಯಕ್ಷರು ನನ್ನ ವಿರುದ್ದ ಅಸಂವಿಧಾನಿಕ ಅವಾಚ್ಯ ಪದಗಳನ್ನು ಬಳಕೆ ಮಾಡಿ ಸಭೆಯಲ್ಲಿ ನಿಂದನೆ ಮಾಡಿರುತ್ತಾರೆ. ಸಾರ್ವಜನಿಕ ನಿಂದನೆಯಿಂದ ಮಾನಸಿಕವಾಗಿ ನೊಂದು ಈ ರಾಜೀನಾಮೆಯನ್ನು ನೀಡಿರುತ್ತೇನೆ” ಎಂದು ಬರೆದಿದ್ದಾರೆ.
ಬುಧವಾರ ಗ್ರಾಮಸಭೆಯ ಮದ್ಯದಲ್ಲಿಯೇ ರಾಮೇಂದ್ರನ್ ಅವರು ರಾಜೀನಾಮೆ ಪತ್ರವನ್ನು ಅಧ್ಯಕ್ಷರಿಗೆ ನೀಡಿ ಸಭೆಯಿಂದ ಹೊರನಡೆದಿದ್ದಾರೆ.
ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತು ಅಧ್ಯಕ್ಷೆಯ ಸರ್ವಾಧಿಕಾರದ ವಿರುದ್ದ ಇದೀಗ ಸ್ವ ಪಕ್ಷದ ಸದಸ್ಯರೇ ಬಂಡಾಯವೆದ್ದು ಗ್ರಾಮಪಂಚಾಯತು ಸದಸ್ಯತ್ವಕ್ಕೆ ರಾಜೀನಾಮೆನೀಡಲು ಮುಂದಾಗಿರುವುದು ವಿಶೇಷವಾಗಿದೆ. ಪಕ್ಷದ ಒಳಗಿನ ಈ ಬಂಡಾಯ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಾಗಿದೆ.