ಬೆಳ್ತಂಗಡಿ;
ವೇಣೂರು ಸಮೀಪದ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿಯಂಗಡಿಯ ಕಡ್ತ್ಯಾರು ಎಂಬಲ್ಲಿ ಭಾನುವಾರ ಸುಡುಮದ್ದು ಘಟಕ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಹಾಗೂ ಇತರ ಇಲಾಖೆಯಿಂದ ಮಾಹಿತಿ ಸಂಗ್ರಹ ಕಾರ್ಯ ನಡೆದಿದ್ದು ಇನ್ನೂ ಕೆಲವೊಂದು ವಿಚಾರಗಳ ತನಿಖೆ ಮುಂದುವರಿದಿದೆ.
ರಾಜ್ಯವನ್ನೇ ಬೆಚ್ಚಿ
ಬೀಳಿಸಿದ್ದ ಈ ಪ್ರಕರಣದ ತನಿಖೆಗೆ ಆಂತರಿಕ ಭದ್ರತಾ ವಿಭಾಗದ ಡಿಐಜಿ ರವಿ ಚೆನ್ನಣ್ಣನವರ್, ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸೇರಿದಂತೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಉಪನಿರ್ದೇಶಕ (ಆಡಳಿತ) ತಿಪ್ಪೇಸ್ವಾಮಿ ಮುಖ್ಯ ಅಗ್ನಿಶಾಮಕ ಅಧಿಕಾರಿ ತಿರುಮಲೇಶ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಂಗನಾಥ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿ ವರ್ಗ ಆಗಮಿಸಿತ್ತು.
ಸ್ಥಳದಲ್ಲಿ ಸಿಕ್ಕಿರುವ ಸುಡುಮದ್ದು,ತಯಾರಿಯ ಕಚ್ಚಾ ವಸ್ತು ಇತ್ಯಾದಿಗಳನ್ನು ವಿಧಿವಿಜ್ಞಾನ ವಿಭಾಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಇದರ ವರದಿ ಬಂದ ಬಳಿಕವಷ್ಟೇ ಸ್ಪೋಟದ ನಿಖರ ಕಾರಣ ತಿಳಿದು ಬರಲಿದೆ.
-ಇಬ್ಬರಿಗೆ ಪೊಲೀಸ್ ಕಸ್ಟಡಿ-
ಸುಡುಮದ್ದು ಘಟಕದ ಮಾಲಕ ಸೈಯದ್ ಬಶೀರ್ ನನ್ನು ಸುಳ್ಯದಲ್ಲಿ ಹಾಗೂ ಘಟಕಕ್ಕೆ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸುತ್ತಿದ್ದ ಹಾಸನ ಮೂಲದ ಕಿರಣ್ ಎಂಬಾತನನ್ನು ವೇಣೂರು ಬಳಿ ಪೊಲೀಸರು ಬಂಧಿಸಿದ್ದು ಇಬ್ಬರನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಫೆ.5ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
-ಪೋಲಿಸ್ ನಿಯೋಜನೆ-
ಹೆಚ್ಚಿನ ತನಿಖೆ,ಸ್ಥಳದಲ್ಲಿ ಸಿಕ್ಕಿದ ವಸ್ತುಗಳ ಸಂಗ್ರಹ ಕಾರ್ಯ ನಡೆದಿದ್ದು ಕೊನೆಯ ಹಂತದ ಕೆಲವು ತನಿಖೆಗಳು ಬಾಕಿ ಇರುವುದರಿಂದ ಸ್ಪೋಟ ಸ್ಥಳದ 100ಮೀ. ವ್ಯಾಪ್ತಿಯೊಳಗೆ ಅಗತ್ಯ ಅಧಿಕಾರಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಿಸಲಾಗಿದೆ. ಹೆಚ್ಚಿನ ಬಂದೋಬಸ್ತ್ ಗಾಗಿ ಸ್ಥಳದಲ್ಲಿ ತನಿಖೆ ಪೂರ್ಣಗೊಳ್ಳುವ ತನಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ