ಬೆಳ್ತಂಗಡಿ; ಸಂಪೂರ್ಣ ಹದಗೆಟ್ಟು ಹೋದ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯನ್ನು ಶೀಘ್ರ ದುರಸ್ತಿಗೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಣಿಯೂರು ಬ್ಲಾಕ್ ಸಮಿತಿಯು ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯರಾದ ನಿಸಾರ್ ಕುದ್ರಡ್ಕ ನೇತೃತ್ವದಲ್ಲಿ ಕಲ್ಲೇರಿ ಜಂಕ್ಷನ್ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಪಕ್ಷದ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ, ವರ್ಷಗಳಿಂದ ಈ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ದಿನನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ರಸ್ತೆಯಲ್ಲಿ ಗುಂಡಿ ಬಿದ್ದಿದ್ದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಉದಾಹರಣೆಗಳಿವೆ. ದಿನನಿತ್ಯ ಈ ಮಾರ್ಗದಲ್ಲಿ ಶಾಲಾ- ಕಾಲೇಜು ಮಕ್ಕಳು ಓಡಾಡುತ್ತಿದ್ದು ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ತಿ ಮಾಡಿಕೊಡಬೇಕು. ಕೋಮು ದ್ವೇಷ ಭಾಷಣ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನಹರಿಸಿ ಮೂಲಭೂತ ಸೌಕರ್ಯಗಳಾದ ರಸ್ತೆಯ ಬಗ್ಗೆ ಹೆಚ್ಚು ಗಮನಹರಿಸಿ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಈ ಕ್ಷೇತ್ರದ ಜನರು ಮನೆಗೆ ಕಳುಹಿಸುತ್ತಾರೆ, 40%ಕಮಿಷನ್ ಪಡೆಯಲು ಸಾಧ್ಯವಾಗದಿರುವುದೇ ರಸ್ತೆ ಅಭಿವೃದ್ಧಿಯ ಕಾಮಗಾರಿಗಳನ್ನು ಮಾಡದಿರಲು ಕಾರಣವೇ ಎಂದು ಶಾಸಕ ಹರೀಶ್ ಪೂಂಜಾರನ್ನು ಪ್ರಶ್ನಿಸಿದರು. ಮದ್ದಡ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಯಂತ್ರದ ಅಡಿಗೆ ಬಿದ್ದು ವೃದ್ಧ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಅವರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು. ಈ ಘಟನೆಗೆ ಯಂತ್ರದ ಚಾಲಕನ ಅಜಾಗರೂಕತೆ ಕಾರಣವಾದರೂ ಇದರ ಹೊಣೆಯನ್ನು ಕಾಂಟ್ರಾಕ್ಟ್ದಾರರು ಮತ್ತು ಇಂಜಿನಿಯರ್ ಆಗಿರುತ್ತಾರೆ ಅವರ ಮೇಲೆ ಎಫ್ ಐ ಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅದೇ ರೀತಿ ಬಂಟ್ವಾಳದ ಅವೈಜ್ಞಾನಿಕ ಸರ್ಕಲ್ ಗೆ ಇತ್ತೀಚಿಗೆ ವಾಹನ ಡಿಕ್ಕಿ ಹೊಡೆದು ಎರಡು ಅಮೂಲ್ಯ ಜೀವಗಳು ಕಳೆದುಕೊಂಡಿದೆ. ಈ ಸರ್ಕಲ್ ನಿರ್ಮಿಸಿದ ಇಂಜಿನಿಯರ್ ಮತ್ತು ಕಾಂಟ್ರಾಕ್ಟ್ದಾರರಿಗೆ ಕೇಸು ದಾಖಲಿಸಿ ಮೃತ ವ್ಯಕ್ತಿಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪುತ್ತೂರು ಶಾಸಕರು ಅಭಿವೃದ್ಧಿಯ ಕಡೆಗೆ ಗಮನವನ್ನು ನೀಡದೆ ಸಂಘ ಪರಿವಾರ ಮತ್ತು ಬಿಜೆಪಿಯನ್ನು ಸಂತುಷ್ಟಗೊಳಿಸಲು ಗುಂಡಿನ ಹೇಳಿಕೆಯನ್ನು ನೀಡಿ ಬೆದರಿಸುವುದಾದರೆ ನಿಮ್ಮ ಬೆದರಿಕೆಗೆ ಬೆದರುವ ಕಾಲ ಇದಲ್ಲ, ಬದಲಾಗಿ ನಿಮ್ಮ ಗುಂಡನ್ನು ಕಾನೂನಾತ್ಮಕವಾಗಿ ತಡೆಯುವ ಕಾಲ ಇದಾಗಿದೆ. ಈ ರೀತಿಯ ಹೇಳಿಕೆ ಮತ್ತು ತಮ್ಮ ಪ್ರಚಾರವನ್ನು ಬದಿಗಿರಿಸಿ ಪುತ್ತೂರು ನಗರದ ಹೊಂಡಮಯವಾದ ರಸ್ತೆಯನ್ನು ಅಭಿವೃದ್ಧಿಪಡಿಸಿ ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಪುತ್ತೂರಿನ ನಾಗರಿಕರು ನಿಮ್ಮನ್ನು ವಿಧಾನಸಭೆಗೆ ಕಳಿಸುವ ಬದಲು ಮನೆಗೆ ಕಳುಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಪಂಚಾಯತ್ ಸದಸ್ಯರಾದ ಫೈಝಲ್ ಮೂರುಗೋಳಿ, ಅನ್ವರ್ ತೆಕ್ಕಾರು, ಬ್ಲಾಕ್ ನಾಯಕರುಗಳಾದ ಸಾದಿಕ್ ಕುದ್ರಡ್ಕ, ರಝಕ್ ಬಿ.ಎಂ, ರಝಕ್ ಕುದ್ರಡ್ಕ, ಶುಕೂರ್ ಕುಪ್ಪೆಟ್ಟಿ, ರೌಫ್ ಪುಂಜಾಲಕಟ್ಟೆ, ಬ್ರಾಂಚ್ ಪದಾಧಿಕಾರಿಗಳು, ಕಾರ್ಯಕರ್ತರು, ನಾಗರೀಕರು ಪಾಲ್ಗೊಂಡಿದ್ದರು




