ಬೆಳ್ತಂಗಡಿ : ಪೆಟ್ರೋಲ್ ಮುಗಿದ ಕಾರಣ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಬೈಕ್ ಕಳ್ಳತನ ಮಾಡಿದ ಪ್ರಕರಣವನ್ನು ವೇಣೂರು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಕೆರೆಕೋಡಿ ನಿವಾಸಿ ಮಹಮ್ಮದ್ ಇರ್ಷಾದ್(25) ಮತ್ತು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ಸಾದಿಕ್ ಖಾನ್(26) ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳನ್ನು ನ.21 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ನ.11 ರಂದು ರಾತ್ರಿ ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ ಪೆಟ್ರೋಲ್ ಖಾಲಿಯಾಗಿದ ಕಾರಣದಿಂದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಗ್ರಾಮದ ಪಾಣೂರು ಗುರುನಾರಾಯಣ ಸರ್ಕಲ್ ಬಳಿ ತಮ್ಮ KA-18-J-6348 ಬೈಕ್ ನಿಲ್ಲಿಸಿ ಹೋಗಿದ್ದರು. ಬಳಿಕ ನ.12 ರಂದು ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ರೂ ಬೈಕ್ ಪತ್ತೆಯಾಗದ ಕಾರಣ ನ.13 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಸಂಪತ್ ಕುಮಾರ್ ಪ್ರಕರಣ ದಾಖಲಿಸಿದ್ದರು.
ವೇಣೂರು ಸಬ್ ಇನ್ಸ್‌ಪೆಕ್ಟರ್ ಓಮನ ಮತ್ತು ಸಿಬ್ಬಂದಿ ನ.20 ರಂದು ಸಂಜೆ 6:30 ರ ಸಮಯದಲ್ಲಿ ವೇಣೂರು ಗ್ರಾಮದ ಕೆರೆಕೋಡಿ ಕರ್ತವ್ಯ ವೇಳೆ ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ.
ಬೈಕ್ ವಶಕ್ಕೆ ಪಡೆದುಕೊಂಡು ಇಬ್ಬರನ್ನು ಕೂಡ ವೇಣೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಗುರುನಾರಾಯಣ ಸರ್ಕಲ್ ಬಳಿ ನಿಲ್ಲಿಸಿದ ಬೈಕ್ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ. ಬಂಧಿತ ಆರೋಪಿಗಳಲ್ಲಿ ಓರ್ವ ಇರ್ಷಾದ್ ಮೇಲೆ ವೇಣೂರು ಪೊಲೀಸ್ ಠಾಣೆಯಲ್ಲಿ ಮತ್ತು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ ಈ ಹಿಂದೆ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಪುರ್ ಮಠ್ ನೇತೃತ್ವದಲ್ಲಿ, ವೇಣೂರು ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಮತ್ತು ಸಬ್ ಇನ್ಸ್‌ಪೆಕ್ಟರ್ ಓಮನ ,ಎಎಸ್ಐ ವೆಂಕಟೇಶ್ ನಾಯ್ಕ್, ಸಿಬ್ಬಂದಿ ಮೋಹನ್, ಬಸವರಾಜ್, ಕೃಷ್ಣ, ಕೇಶವತಿ, ನಾಗರಾಜಪ್ಪ,ರಾಕೇಶ್,ಈರ ನಾಯ್ಕ್ ಹಾಗೂ ಚಾಲಕ ಕಿರಣ್ ಕಾರ್ಯಾಚರಣೆ ಭಾಗವಹಿಸಿದರು.




