ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಅವರು ಸಲ್ಲಿಸಿರುವ ಎರಡು ಮಹತ್ವದ ಅರ್ಜಿಗಳು ರಾಜ್ಯ ಉಚ್ಚನ್ಯಾಯಾಲಯ ದಲ್ಲಿ ಸೋಮವಾರ ವಿಚಾರಣೆಗೆ ಬರಲಿದ್ದು ನ್ಯಾಯಾಲಯದ ತೀರ್ಪು ಮಹೇಶ್ ಶೆಟ್ಟಿ ತಿಮರೋಡಿ ಅವರ ಪಾಲಿಗೆ ಅತ್ಯಂತ ಮಹತ್ವದ್ದಾಗಲಿದೆ.
ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಮಾಡಿ ಪುತ್ತೂತು ಸಹಾಯಕ ಕಮಿಷನರ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ನೀಡಿರುವ ಅರ್ಜಿ ಮತ್ತು ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನ17ರಂದು ನಡೆಯಲಿದೆ.
ರೌಡಿಶೀಟರ್ ಆಗಿರುವ ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಒಂದು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಪುತ್ತೂರು ಎ.ಸಿ.ಸ್ಟೆಲ್ಲಾ ವರ್ಗಿಸ್ ಸೆ.18 ರಂದು (18-09-2025 ರಿಂದ 17-09-2026 ರವೆಗೆ) ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು.
ಈ ಆದೇಶದ ವಿರುದ್ಧ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ನಲ್ಲಿ ಸೆ.29 ರಂದು ಗಡಿಪಾರು ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಅ.13 ರಂದು ವಿಚಾರಣೆ ನಡೆಸಿ ಮಹೇಶ್ ಶೆಟ್ಟಿ ತಿಮರೋಡಿ ಅವರ ಮೇಲೆ ಮುಂದಿನ ಆದೇಶದವರೆಗೆ ಬಲವಂತದ ಕ್ರಮ ಬೇಡ ಎಂದು ಸೂಚನೆ ನೀಡಿ ಗಡಿಪಾರು ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು. ಇಂದು ಪ್ರಕರಣ ಮತ್ತೆ ಹೈಕೋರ್ಟ್ ಮುಂದೆ ಬರಲಿದ್ದು ನ್ಯಾಯಾಲಯದಿಂದ ಯಾವ ತೀರ್ಪು ಬರಲಿದೆ ಎಂಬುದು ಕುತೂಹಲದ ವಿಚಾರವಾಗಿದೆ
ಎಸ್ಐಟಿ ಅಧಿಕಾರುಗಳು ಮಹಜರು ನಡೆಸಲು ತೆರಳಿದ್ದ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ಒಂದು ಅಕ್ರಮ ಬಂದೂಕು ಮತ್ತು ಎರಡು ತಲವಾರು ಪತ್ತೆಯಾದ ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ಅವರು ಹೈಕೋರ್ಟ್ ನಲ್ಲಿ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಾಲಯ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿತ್ತು. ಇದರ ಮುಂದುವರಿದ ಅರ್ಜಿ ವಿಚಾರಣೆ ನ.17 ರಂದು(ಇಂದು) ನಡೆಯಲಿದೆ.
ಈ ಎರಡೂ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಬರುವ ಆದೇಶಗಳು ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಅತ್ಯಂತ ಮಹತ್ವದ್ದಾಗಲಿದೆ








