ಮಂಗಳೂರು: ಬೀದಿ ನಾಯಿಯೊಂದರ ಭೀಕರ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕುಂಪಲದಲ್ಲಿ ಶುಕ್ರವಾರ (ನ.14) ಮುಂಜಾನೆ ನಡೆದಿದೆ.
ಮೃತ ವ್ಯಕ್ತಿಯನ್ನು ಕುಂಪಲ ನಿವಾಸಿ ದಯಾನಂದ (60 ವ) ಎಂದು ಗುರುತಿಸಲಾಗಿದೆ. ನಾಯಿಯ ಭೀಕರ ದಾಳಿಗೆ ಒಳಗಾದ ಮೃತದೇಹ ಕಂಡ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಬಳಿ ರಸ್ತೆ ಬದಿಯ ಅಂಗಡಿಯ ಎದುರಲ್ಲಿ ಕಳೆದ ರಾತ್ರಿ ದಯಾನಂದ ಮಲಗಿದ್ದರು. ಮದ್ಯಪಾನ ಸೇವಿಸಿ ಮಲಗಿದ್ದ ಇವರ ಮೇಲೆ ಮುಂಜಾನೆ ವೇಳೆ ನಾಯಿ ದಾಳಿ ಮಾಡಿದೆ ಎನ್ನಲಾಗಿದೆ. ಅಂಗಡಿಯ ಮುಂದೆ ಇವರು ಮಲಗಿದ್ದ ಜಾಗದಲ್ಲಿ ಹಣ ಹಾಗೂ ರಕ್ತ ಕಾಣಿಸಿದೆ. ಬೀದಿ ನಾಯಿ ದಾಳಿ ನಡೆಸಿದ ವೇಳೆ ಅಲ್ಲಿಂದ ರಸ್ತೆಯ ಮತ್ತೊಂದೆಡೆಯ ಮನೆಯತ್ತ ಓಡಿದ್ದರು. ಅಲ್ಲಿಯೂ ಬೆನ್ನಟ್ಟಿದ್ದ ನಾಯಿ ಮತ್ತೆ ದಾಳಿ ನಡೆಸಿ ಕೊಂದೇ ಹಾಕಿದೆ ಎಂದು ತಿಳಿದು ಬಂದಿದೆ.
ರಸ್ತೆ ಬದಿಯ ಮನೆ ಮುಂದೆ ಮೃತದೇಹ ಕಂಡ ಸ್ಥಳೀಯರು ಇದೊಂದು ಕೊಲೆ ಎಂದೇ ಭಾವಿಸಿದ್ದರು. ದೇಹದ ಮೇಲೆ ಕಡಿದ ರೀತಿಯ ಗಾಯಗಳು ಅಷ್ಟೊಂದು ತೀವ್ರವಾಗಿತ್ತು. ವ್ಯಕ್ತಿ ಕಣ್ಣು ಸೇರಿ ದೇಹ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು. ಸ್ಥಳಕ್ಕೆ ಆಗಮಿಸಿದ ವಿಧಿ ವಿಜ್ಞಾನ ತಜ್ಞರು ಇದೊಂದು ಪ್ರಾಣಿ ದಾಳಿ ಎಂದು ಸೂಚಿಸಿದರು. ಬಳಿಕ ಇದು ನಾಯಿಯ ದಾಳಿ ಎಂದು ಖಚಿತವಾಯಿತು. ಬಾಯಲ್ಲಿ ರಕ್ತ ಸುರಿಸುತ್ತಾ ನಾಯಿಯೊಂದು ಓಡಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದು ನಾಯಿ ದಾಳಿಯಿಂದಲೇ ಈತ ಮೃತೊಟ್ಟಿದ್ದಾನೆ ಎಂಬುದು ಬಹುತೇಕ ಖಚಿತವಾಗಿದೆ.
ಸದ್ಯ ನಾಯಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



